ಅಚ್ಚ ಕನ್ನಡದ ಸ್ವಚ್ಚ ನಿರೂಪಕಿ ಕಂ ನಟಿ ಅಪರ್ಣಾ ಕ್ಯಾನ್ಸರ್ ನಿಂದ ವಿಧಿವಶರಾಗಿದ್ದಾರೆ. ಕಳೆದ ಎರಡು ವರ್ಷಗಳಿಂದ ಶ್ವಾಸಕೋಶ ಕ್ಯಾನ್ಸರ್ನಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಜುಲೈ 11ರಂದು ರಾತ್ರಿ ಇಹಲೋಕ ತ್ಯಜಿಸಿದ್ದಾರೆ.
ಇಂದು ಮೆಟ್ರೋದಲ್ಲಿ ಕೇಳಿ ಬರುವ ಚಂದದ ಧ್ವನಿ ಅಪರ್ಣಾ ಅವರದ್ದು. ಅಪರ್ಣಾ ಅವರು ನಮ್ಮ ಮೆಟ್ರೋ ಮಾತ್ರವಲ್ಲದೇ ಹಲವರು ಬಸ್ ನಿಲ್ದಾಣಗಳಲ್ಲಿನ ಘೋಷಣೆಗಳಿಗೆ ಧ್ವನಿಯಾಗಿದ್ದಾರೆ.
ಭಾಷೆಯ ಮೇಲಿನ ಹಿಡಿತ ಮತ್ತು ಉಚ್ಛಾರಣೆ ಕರಗತವಾಗಿದ್ದ ಅಪರ್ಣಾ ಅವರಿಗೆ ನಮ್ಮ ಮೆಟ್ರೋಗೆ ತಮ್ಮ ಧ್ವನಿ ನೀಡಲು ಅವಕಾಶ ಸಿಕ್ಕಿದ್ದು ಹೇಗೆ ಎನ್ನುವುದರ ಬಗ್ಗೆ ಈ ಹಿಂದೆ ನೀಡಿದ್ದ ಸಂದರ್ಶವೊಂದರಲ್ಲಿ ವಿವರಿಸಿದ್ದರು.
“ಬೆಂಗಳೂರು ಮೆಟ್ರೋಗೂ ನನಗೂ ಯಾವ ರೀತಿಯ ಸಂಬಂಧ ಅಂದರೆ ನನಗೆ ಒಂದೊಂದು ಸಲ ಆಶ್ಚರ್ಯ ಜೊತೆಗೆ ಹೆಮ್ಮೆ ಅನಿಸುತ್ತದೆ. ಒಂದು ದಿನ ನನಗೊಂದು ಕರೆ ಬಂತು. ಹತ್ತು-ಹನ್ನೆರಡು ವರ್ಷದ ಹಿಂದೆನೇ ಆಗಿರಬಹುದು. ನಿಮ್ಮ ಒಂದು ಧ್ವನಿ ಬೇಕು ಅಂತಾ ಕರೆ ಬಂತು. ಯಾವುದಕ್ಕೆ ಕೇಳಿದಾಗ ಮೆಟ್ರೋಗೆ ಅಂತಾ ಹೇಳಿದರು.
ಏನು ಎತ್ತಾ ಅಂತಾ ಕೇಳಿದಾಗ ನಿಮ್ಮ ಒಂದು ವಾಯ್ಸ್ ಸ್ಯಾಂಪಲ್ ಕೊಡಬಹುದಾ ಅಂತಾ ಕೇಳಿದರು. ನಿಜ ಹೇಳಬೇಕು ಅಂದರೆ ಆ ಸಮಯದಲ್ಲಿ ವಾಯ್ಸ್ ಸ್ಯಾಂಪಲ್ ಎಲ್ಲಾ ಕೊಡಬೇಕು ಅದೆಲ್ಲಾ ನನಗೆ ಏನೂ ಗೊತ್ತಿರಲಿಲ್ಲ. ನನಗೆ ಇನ್ನೂ ಚೆನ್ನಾಗಿ ನೆನಪಿದೆ. ಒಂದು ಇಂಗ್ಲಿಷ್ ಪತ್ರಿಕೆ, ಒಂದು ಕನ್ನಡ ಪತ್ರಿಕೆ ಹಿಡಿದುಕೊಂಡು ಒಂದೊಂದು ಪ್ಯಾರಾ ಓದಿ ರೆಕಾರ್ಡ್ ಮಾಡಿ ಕಳುಹಿಸಿದ್ದೆ.
ಈ ಬಗ್ಗೆ ಆ ಸಮಯದಲ್ಲಿ ಚೈನೈನಲ್ಲಿ ನಿರ್ಧಾರ ತೆಗೆದುಕೊಳ್ಳುತ್ತಿದ್ದರಂತೆ. ಅಲ್ಲಿ ಅವರು ಈ ಧ್ವನಿ ಇರಲಿ ಅಂತಾ ನನ್ನ ವಾಯ್ಸ್ನ ಆಯ್ಕೆ ಮಾಡಿದ್ದರು. ಆ ಮೇಲೆ ಅವರು ನನಗೊಂದು ಇ-ಮೇಲ್ ಕಳುಹಿಸಿದರು. ನಿಮ್ಮ ಧ್ವನಿ ಆಯ್ಕೆ ಆಗಿದೆ. ನೀವು ಒಂದು ಕಾಂಟ್ರ್ಯಾಕ್ಟ್ ಗೆ ಸಹಿ ಹಾಕಬೇಕು ಅಂದಾಗ ಖುಷಿ ಆಯ್ತು.
ಆಮೇಲೆ ಅಲ್ಲಿಗೆ ಹೋದೆ. ಅಲ್ಲಿ ನೋಡಿದರೆ ಒಂದು ದೊಡ್ಡ ಸ್ಕ್ರಿಪ್ಟ್. ಅಲ್ಲಿ ನಮ್ಮ ಬಡಾವಣೆಗಳ ಹೆಸರು ಇದೆ. ಈಗ ಏನು ಮೆಟ್ರೋದಲ್ಲಿ ಸೂಚನೆ ಬರುತ್ತದೆ. ಅದೆಲ್ಲಾ ಇತ್ತು. ಇದೆಲ್ಲಾ ಯಾಕೆ ಅಂತೆಲ್ಲಾ ಪ್ರಶ್ನೆ ಮಾಡಿದೆ. ನನಗೆ ಈ ಬಗ್ಗೆ ಗೊತ್ತಿಲ್ಲ ಇದು ಹೇಗೆ ಬರುತ್ತದೆ ಅಂತಾ ಕೇಳಿದೆ. ಆಗ ಅವರು ಹೇಳಿದರು. ಎಲ್ಲೋ ಮೆಟ್ರೋ ಸ್ಟೇಷನ್ನಲ್ಲಿ ನಿಂತರೆ ಬಾಗಿಲು ತೆರೆಯುವುದು ಬಡಾವಣೆ ಹೆಸರು ಹೇಳುವುದು ಅದೆಲ್ಲಾ ಸೂಚನೆ ನೀಡಬೇಕಾಗುತ್ತದೆ. ಹೀಗಾಗಿ ರೆಕಾರ್ಡ್ ಮಾಡುತ್ತಿದ್ದೇವೆ ಅಂದರು. ಅದಾದ ಮೇಲೆ ರೆಕಾರ್ಡ್ ಮಾಡಲಾಯಿತು. ಅಲ್ಲಿಗೆ ಬಿಟ್ಟರು ಅಷ್ಟೆ. ಆಗ ಮೆಟ್ರೋ ಏನೂ ಶುರು ಆಗಿರಲಿಲ್ಲ. ಸ್ಪಲ್ಪ ದಿನ ಕಾದ ಮೇಲೆ ಒಂದು ಒಳ್ಳೆ ದಿನ ಮೆಟ್ರೋ ಆರಂಭವಾಯಿತು” ಎಂದು ಅಪರ್ಣಾ ಈ ಹಿಂದೆ ಮೆಟ್ರೋಗೆ ಧ್ವನಿ ನೀಡಲು ಸಿಕ್ಕ ಅವಕಾಶದ ಬಗ್ಗೆ ವಿವರಿಸಿದ್ದರು. ಜೊತೆಗೆ ಮೊದಲು ತನ್ನ ವಾಯ್ಸ್ ಹೇಗೆ ಕೇಳುತ್ತದೆ ಎಂದು ಕೇಳಲು ಅಪರ್ಣಾ ಮೆಟ್ರೋದಲ್ಲಿ ಪ್ರಯಾಣಿಸಿದ್ದರು ಕೂಡ.