ಸಂಸತ್ತಿನಲ್ಲಿ ನಡೆದ ಚುನಾವಣೆಯಲ್ಲಿ ವಿಶ್ವಾಸ ಮತ ಗಳಿಸುವಲ್ಲಿ ನೇಪಾಳದ ಪ್ರಧಾನಿ ಪುಷ್ಪ ಕಮಲ್ ದಹಾಲ್ ‘ಪ್ರಚಂಡ’ ಭಾರೀ ಹಿನ್ನಡೆ ಅನುಭವಿಸಿದ್ದಾರೆ. ಮಾಜಿ ಪ್ರಧಾನಿ ಕೆಪಿ ಶರ್ಮಾ ಓಲಿ ನೇತೃತ್ವದ ಸಿಪಿಎನ್-ಯುಎಂಎಲ್ ಅವರ ಸರ್ಕಾರಕ್ಕೆ ಬೆಂಬಲವನ್ನು ಹಿಂತೆಗೆದುಕೊಂಡ ನಂತರ ‘ಪ್ರಚಂಡ’ ಅವರು ವಿಶ್ವಾಸ ಮತ ಸಾಬೀತುಪಡಿಸಬೇಕಾಗಿತ್ತು.
ಪ್ರಚಂಡ ಅವರು ಸಂಸತ್ತಿನಲ್ಲಿ ಅವಿಶ್ವಾಸ ಮತವನ್ನು ಎದುರಿಸಿದ್ದು ಇದು ಐದನೇ ಬಾರಿ. ಇದಕ್ಕೂ ಮುನ್ನ ನಾಲ್ಕು ಪ್ರಯತ್ನಗಳಲ್ಲಿ ವಿಶ್ವಾಸಮತ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಆದರೆ ಐದನೇ ಬಾರಿ ಹಿನ್ನಡೆ ಅನುಭವಿಸಿದ್ದಾರೆ. ದಹಾಲ್ನ ಅತಿದೊಡ್ಡ ಒಕ್ಕೂಟದ ಪಾಲುದಾರ CPN-UML ಜುಲೈ 3ರಂದು ತನ್ನ ಬೆಂಬಲವನ್ನು ಹಿಂತೆಗೆದುಕೊಂಡಿತು. 2022ರ ಡಿಸೆಂಬರ್ 25ರಂದು ಪ್ರಧಾನಿಯಾದ ನಂತರ, ದಹಾಲ್ ನಿರಂತರವಾಗಿ ಅಲ್ಪಸಂಖ್ಯಾತ ಸರ್ಕಾರವನ್ನು ಮುನ್ನಡೆಸುತ್ತಿದ್ದು ಸುಮಾರು 19 ತಿಂಗಳಲ್ಲೇ ಪತನವಾಗಿದೆ. 275 ಸದಸ್ಯರ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ನಲ್ಲಿ 69 ವರ್ಷದ ಪ್ರಚಂಡ ಅವರು 63 ಮತಗಳನ್ನು ಪಡೆದರು, ಪ್ರಸ್ತಾವನೆಗೆ ವಿರುದ್ಧವಾಗಿ 194 ಮತಗಳು ಚಲಾವಣೆಯಾಗಿವೆ.
ಇದಕ್ಕೂ ಮುನ್ನ ಪ್ರಚಂಡ ಅವರು ನೇಪಾಳಿ ಕಾಂಗ್ರೆಸ್ ಮತ್ತು ಸಿಪಿಎನ್-ಯುಎಂಎಲ್ ಅನೈತಿಕ ಮೈತ್ರಿ ಮಾಡಿಕೊಂಡಿವೆ ಎಂದು ಕಟುವಾಗಿ ಟೀಕಿಸಿದರು. ಅವರು ದೇಶವನ್ನು ಅವನತಿಯ ಹಾದಿಗೆ ತಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ವಿಶ್ವಾಸ ಮತದ ಮೊದಲು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಅನ್ನು ಉದ್ದೇಶಿಸಿ ಮಾತನಾಡಿದ ಪ್ರಚಂಡ, ನೇಪಾಳಿ ಕಾಂಗ್ರೆಸ್ (ಎನ್ಸಿ) ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ-ಯುನಿಫೈಡ್ ಮಾರ್ಕ್ಸ್ಸ್ಟ್ ಲೆನಿನಿಸ್ಟ್ (ಸಿಪಿಎನ್-ಯುಎಂಎಲ್) ಒಟ್ಟಿಗೆ ಕೆಲಸ ಮಾಡಿದ್ದು, ಆ ಮೂಲಕ ದೇಶದಲ್ಲಿ ಉತ್ತಮ ಆಡಳಿತದ ಬೇರುಗಳನ್ನು ಹಾಕಿದೆ ಎಂದು ಹೇಳಿದರು. “NC ಮತ್ತು UML ಒಂದೇ ರೀತಿಯ ನಂಬಿಕೆಗಳು ಅಥವಾ ಗುರಿಗಳಿಗಾಗಿ ಒಂದಾಗಿದ್ದರೆ, ನಾನು ಚಿಂತಿಸುವುದಿಲ್ಲ” ಎಂದು ಪ್ರಚಂಡ ತಿಳಿಸಿದ್ದರು.