ಬೆಂಗಳೂರು: ಅಕ್ರಮ ಸಂಬಂಧಕ್ಕೆ ಮಗು ಅಡ್ಡಿಯಾಗ್ತಾಯಿದೆ ಎಂದು ಪ್ರಿಯತಮೆಯ ಮೂರು ವರ್ಷದ ಕಂದಮ್ಮನನ್ನು ಕೊಲೆ ಮಾಡಿದ ಆರೋಪದಡಿ ಪ್ರಿಯಕರನನ್ನ ಬೊಮ್ಮನಹಳ್ಳಿ ಠಾಣೆ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಮೂರು ವರ್ಷದ ಅಶ್ವಿನ್ ಕೊಲೆಯಾದ ನತದೃಷ್ಟ ಮಗು. ಮಗುವಿನ ತಾಯಿ ರಮ್ಯ ಎಂಬುವರು ನೀಡಿದ ದೂರಿನ ಮೇರೆಗೆ ಪ್ರಿಯಕರ ಮೈಕೆಲ್ ರಾಜ್ ನನ್ನ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.ಅವಿವಾಹಿತನಾಗಿದ್ದ ಆರೋಪಿಯು ಬೊಮ್ಮನಹಳ್ಳಿಯ ವಿರಾಟ್ ನಗರದಲ್ಲಿ ವಾಸವಾಗಿದ್ದು ಜೀವನಕ್ಕಾಗಿ ಗ್ಯಾರೇಜ್ ಅಂಗಡಿ ಇಟ್ಟುಕೊಂಡಿದ್ದ.
ಇದೇ ಏರಿಯಾ ಸಮೀಪದಲ್ಲಿ ರಮ್ಯ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದರು. ಈಕೆಗೆ ಆರು ವರ್ಷಗಳ ಹಿಂದೆ ಅಕ್ಕನ ಗಂಡನ ಜೊತೆ ಪ್ರೇಮ ವಿವಾಹವಾಗಿತ್ತು. ಒಂದು ವರ್ಷದ ಹಿಂದೆ ಇಬ್ಬರ ನಡುವೆ ವೈಮನಸ್ಸು ಬಂದಿದ್ದರಿಂದ ಗಂಡನಿಂದ ರಮ್ಯ ದೂರವಾಗಿದ್ದಳು. ಈ ವೇಳೆ ಆರೋಪಿ ಮೈಕೆಲ್ ರಾಜ್ ನ ಪರಿಚಯವಾಗಿದೆ. ಕ್ರಮೇಣ ಇಬ್ಬರ ಸಂಬಂಧ ಆತ್ಮೀಯತೆಗೆ ತಿರುಗಿತ್ತು.
ಕಳೆದ ಆರೇಳು ತಿಂಗಳಿಂದ ರಮ್ಯಾಳ ಮನೆಗೆ ಆರೋಪಿ ಬಂದು ಹೋಗುತ್ತಿದ್ದ. ಜುಲೈ 6ರಂದು ಮನೆಗೆ ಬಂದಿದ್ದಾಗ ಮನೆಯಲ್ಲಿದ್ದ ಅಶ್ವಿನ್ ನನ್ನ ನೋಡಿದ ಕೋಪಗೊಂಡಿದ್ದ. ತಮ್ಮಿಬ್ಬರ ಸಂಬಂಧಕ್ಕೆ ಮಗು ಅಡ್ಡಿಯಾಗಲಿದೆ ಎಂದು ಭಾವಿಸಿ ಕೆನ್ನೆಗೆ ಹೊಡೆದಿದ್ದಾನೆ. ನಂತರ ಬಾತ್ ರೂಮ್ ನ ಗೋಡೆಗೆ ಮಗುವಿನ ತಲೆ ಗುದ್ದಿಸಿದ್ದರಿಂದ ಊತ ಕಂಡುಬಂದಿತ್ತು.
ಇದನ್ನ ರಮ್ಯಳಿಗೆ ಹೇಳದೆ ಆರೋಪಿ ಮಾರೆ ಮಾಚಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಮಗುವಿನ ಮೇಲೆ ಹಲ್ಲೆ ಆಗಿರುವ ವಿಷಯ ತಾಯಿಗೆ ತಿಳಿದಿರಲಿಲ್ಲ. ಅದೇ ದಿನ ರಾತ್ರಿ ಮಗುವಿನ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಕೂಡಲೇ ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ನಿಮ್ಹಾನ್ ಆಸ್ಪತ್ರೆಗೆ ಕರೆದೊಯ್ದರೂ ತಲೆಯಲ್ಲಿ ರಕ್ತ ಹೆಪ್ಪುಗಟ್ಟಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿದೆ ಎಂದು ವೈದ್ಯರು ತಿಳಿಸಿದ್ರು…
ಆಗಾಗ ಮನೆಗೆ ಬರುತ್ತಿದ್ದ ಆರೋಪಿ ಮಗುವಿನ ಮೇಲೆ ಸಿಡಿಮಿಡಿಯಾಗ್ತಿದ್ನಂತೆ. ಅಶ್ವಿನ್ ತರಲೆ ಮಾಡುತ್ತಾನೆ ಅನ್ನೋ ಸಣ್ಣ-ಪುಟ್ಟ ಕಾರಣಕ್ಕಾಗಿ ಹೊಡೆಯುತ್ತಿದ್ದ. ತಮ್ಮಿಬ್ಬರ ಖಾಸಗಿ ಕ್ಷಣಗಳಿಗೆ ಮಗು ಅಡ್ಡಿಯಾಗುತ್ತೆ ಎಂದು ತಾಯಿ ಮನೆಯಲ್ಲಿ ಇಲ್ಲದಿರುವಾಗ ಕೆನ್ನೆಗೆ ಹೊಡೆದಿದ್ದ. ಗೋಡೆಗೆ ತಲೆ ಗುದ್ದಿಸಿದ್ದ ಪರಿಣಾಮ ಕಳೆದ ಸೋಮವಾರ ರಾತ್ರಿ ಮಗು ಸಾವನ್ನಪ್ಪಿತ್ತು ಎಂದು ಪೊಲೀಸರು ಮೂಲಗಳು ತಿಳಿಸಿವೆ.