ಮೈಸೂರು ಮೂಲದ ವಿವಾಹಿತೆ ಅನುಮಾನಾಸ್ಪದ ಸಾವನ್ನಪ್ಪಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ನಾಲ್ಕು ತಿಂಗಳ ಗರ್ಭಿಣಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ ಎಂದು ಮೃತ ಮಹಿಳೆಯ ಪೋಷಕರು ಆರೋಪಿಸಿದ್ದಾರೆ.
22 ವರ್ಷದ ಮಂಜುಳಾ ಮೃತ ದುರ್ದೈವಿ. ಮಂಜುಳಾ ಅವರಿಗೆ ಒಂದೂವರೆ ವರ್ಷದ ಹಿಂದೆ ಬೆಳಗಾವಿಯ ಮಚ್ಛೆ ಮೂಲದ ಬಾಳೇಶ ಅವರ ಜೊತೆ ಮದುವೆ ಮಾಡಲಾಗಿತ್ತು. ನಾಲ್ಕು ತಿಂಗಳ ಗರ್ಭಿಣಿಯಾಗಿದ್ದ ಮಂಜುಳಾ ಅವರ ಮೃತದೇಹ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆಮಂಜುಳಾಗೆ ಇನ್ಸ್ಸ್ಟಾಗ್ರಾಂನಲ್ಲಿ ರೀಲ್ಸ್ ಮಾಡುವ ಹವ್ಯಾಸ ಇತ್ತು. ಇನ್ಸ್ಸ್ಟಾಗ್ರಾಂ ಮೂಲಕ ಬಾಳೇಶನ ಪರಿಚಯವಾಗಿತ್ತು. ಪರಿಚಯ ಪ್ರೀತಿಯಾಗಿ ಒಂದೂವರೆ ವರ್ಷದ ಹಿಂದೆ ಮಂಜುಳಾ ಅವರು ಬೆಳಗಾವಿಯ ಬಾಳೇಶನ ಕೈ ಹಿಡಿದಿದ್ದರು. ಇನ್ಸ್ಸ್ಟಾಗ್ರಾಂ ಮೂಲಕ ಪರಿಚಯವಾಗಿದ್ದ ಈ ಪ್ರೇಮಿಗಳ ಮದುವೆಗೆ ಪೋಷಕರ ವಿರೋಧ ಇತ್ತು.
ಒಂದೂವರೆ ವರ್ಷ ಮಂಜುಳಾ, ಬಾಳೇಶನ ಲವ್ ಸ್ಟೋರಿ ಚೆನ್ನಾಗಿಯೇ ಇತ್ತು. ಆದರೆ ಕಳೆದ ಎರಡು ದಿನಗಳ ಹಿಂದೆ ಮನೆಯಲ್ಲೇ ಮಂಜುಳಾ ಶವ ಪತ್ತೆಯಾಗಿದೆ. ಬಾಳೇಶ ಬೆಳಗಾವಿ ಉದ್ಯಮ ಭಾಗದ ಕೈಗಾರಿಕೆ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದ. ಮಂಜುಳಾ ಪೋಷಕರು ಮಗಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ಈ ಘಟನೆಯ ಬಗ್ಗೆ ಪ್ರಕರಣ ದಾಖಲಾಗಿದೆ.