ಜುಲೈ 26ರಿಂದ ಭಾರತ ತಂಡ ಶ್ರೀಲಂಕಾ ಪ್ರವಾಸದಲ್ಲಿ ವೈಟ್ಬಾಲ್ ಕ್ರಿಕೆಟ್ ಸರಣಿ ಆಡಲಿದ್ದು, ಈ ಸರಣಿಗೂ ಮುನ್ನ ಕೋಚಿಂಗ್ ಬಳಗ ಕಟ್ಟಬೇಕಿದೆ. 2007ರ ಟಿ20 ವಿಶ್ವಕಪ್ ಮತ್ತು 2011ರ ಐಸಿಸಿ ಒಡಿಐ ವಿಶ್ವಕಪ್ ಗೆದ್ದ ಭಾರತ ತಂಡದ ಸದಸ್ಯ ಆಗಿರುವ ಗೌತಮ್ ಗಂಭೀರ್, ಈ ಮೊದಲು ಬೌಲಿಂಗ್ ಕೋಚ್ ಆಯ್ಕೆ ಸಲುವಾಗಿ ಕರ್ನಾಟಕ ರಣಜಿ ಕ್ರಿಕೆಟ್ ತಂಡದ ಮಾಜಿ ನಾಯಕ ಆರ್ ವಿನಯ್ ಕುಮಾರ್ ಅವರ ಹೆಸರನ್ನು ಮುಂದಿಟ್ಟಿದ್ದರು.
ಆದರೆ, ಅವರ ಈ ಬೇಡಿಕೆಯನ್ನು ಬಿಸಿಸಿಐ ನಿರಾಕರಿಸಿದೆ ಎಂದು ವರದಿಗಳು ಹೇಳಿವೆ.
ಈಗ ಈ ಸ್ಥಾನಕ್ಕೆ ಹೊಸ ಆಯ್ಕೆ ಎಂಬಂತೆ ಪಾಕಿಸ್ತಾನ ತಂಡದ ಮಾಜಿ ಬೌಲಿಂಗ್ ಕೋಚ್ ಹಾಗೂ ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಮೊರ್ನೆ ಮಾರ್ಕೆಲ್ ಅವರೊಟ್ಟಿಗೆ ಒಪ್ಪಂದ ಮಾಡಿಕೊಳ್ಳುವಂತೆ ಬಿಸಿಸಿಐಗೆ ಗಂಭೀರ್ ಮನವಿ ಮಾಡಿದ್ದಾರೆ ಎಂದು ಬೆಳವಣಿಗೆಗೆ ಹತ್ತಿರದ ಮೂಲಗಳು ಮಾಹಿತಿ ಹೊರಹಾಕಿವೆ. ಈ ಮಧ್ಯೆ ಬೌಲಿಂಗ್ ಕೋಚ್ ಸ್ಥಾನಕ್ಕೆ ಮಾಜಿ ವೇಗಿಗಳಾದ ಲಕ್ಷ್ಮೀಪತಿ ಬಾಲಾಜಿ ಮತ್ತು ಜಹೀರ್ ಖಾನ್ ಅವರ ಹೆಸರು ಮುಂದೆಬಂದಿದೆ.
ಆದರೆ, ಗಂಭೀರ್ ತಲೆಯಲ್ಲಿ ದಕ್ಷಿಣ ಆಫ್ರಿಕಾದ ತಾರೆಯ ಹೆಸರಿದೆ. ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡದಲ್ಲಿ (2014ರಿಂದ 2016ರವರೆಗೆ) ಗಂಭೀರ್ ಮತ್ತು ಮಾರ್ಕೆಲ್ ಜೊತೆಯಾಗಿ ಆಡಿದ ಅನುಭವ ಹೊಂದಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಬಳಿಕ ಮೊರ್ನೆ ಮಾರ್ಕೆಲ್ ಕೋಚಿಂಗ್ನಲ್ಲಿ ತೊಡಗಿಸಿಕೊಂಡಿದ್ದಾರೆ. 2023ರ ಸಾಲಿನ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಅವರು ಪಾಕಿಸ್ತಾನ ತಂಡದ ಬೌಲಿಂಗ್ ಕೋಚ್ ಆಗಿದ್ದರು. ಆದರೆ, ಟೂರ್ನಿಯಲ್ಲಿ ಪಾಕಿಸ್ತಾನ ತಂಡದ ವೈಫಲ್ಯದ ಬಳಿಕ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
39 ವರ್ಷದ ಮಾಜಿ ಕ್ರಿಕೆಟಿಗ ದಕ್ಷಿಣ ಆಫ್ರಿಕಾ ತಂಡದ ಪರ ಈವರೆಗೆ ಒಟ್ಟಾರೆ 86 ಟೆಸ್ಟ್, 117 ಒಡಿಐ ಮತ್ತು 44 ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಪಂದ್ಯಗಳನ್ನು ಆಡಿದ್ದಾರೆ. 2006ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿ ಹರಿಣ ಪಡೆಯಲ್ಲಿ ತಮ್ಮದೇ ಛಾಪು ಮೂಡಿಸಿದ್ದರು. 2018ರಲ್ಲಿ ಅವರು ತಮ್ಮ ಕ್ರಿಕೆಟ್ ಬದುಕಿಗೆ ವಿದಾಯ ಘೋಷಿಸಿ, ಕೋಚಿಂಗ್ ಕೆಲಸ ಕೈಗೆತ್ತಿಕೊಂಡರು. ವಿವಿಧ ಫ್ರಾಂಚೈಸಿ ಮತ್ತು ಅಂತಾರಾಷ್ಟ್ರೀಯ ತಂಡಗಳಲ್ಲಿ ಕೋಚ್ ಆಗಿ ಕೆಲಸ ಮಾಡಿದ ಅನುಭವ ಅವರಲ್ಲಿದೆ. ಇನ್ನು ಬಿಸಿಸಿಐ ಸ್ವದೇಶಿ ಕೋಚ್ ಆಯ್ಕೆ ಕಡೆಗೆ ಹೆಚ್ಚು ಒಲವನ್ನು ಹೊಂದಿದೆ. ಹೀಗಾಗಿ ಮೊರ್ನೆ ಮಾರ್ಕೆಲ್ ನೇಮಕಾತಿಗೆ ಬಿಸಿಸಿಐ ಗ್ರೀನ್ ಸಿಗ್ನಲ್ ನೀಡುವುದು ಬಹುತೇಕ ಅನುಮಾನ ಎಂಬಂತ್ತಾಗಿದೆ.