ನೇಪಾಳದ ಚಿತ್ವಾನ್ ಜಿಲ್ಲೆಯ ನಾರಾಯಣಘಾಟ್-ಮುಗಲಿಂಗ್ ರಸ್ತೆಯಲ್ಲಿ ಶುಕ್ರವಾರ ಬೆಳಿಗ್ಗೆ ಭೂಕುಸಿತ ಸಂಭವಿಸಿದ್ದು ಈ ವೇಳೆ ಎರಡು ಬಸ್ ಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದವು. ಪರಿಣಾಮ ಎರಡು ಬಸ್ಗಳಲ್ಲಿ ಪ್ರಯಾಣಿಸುತ್ತಿದ್ದ ಏಳು ಭಾರತೀಯರು ಸೇರಿದಂತೆ 50 ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಇವರ ಪತ್ತೆಗಾಗಿ ನೇಪಾಳದ ಭದ್ರತಾ ಪಡೆಗಳ ನೆರವಿನೊಂದಿಗೆ ರಕ್ಷಣಾ ಕಾರ್ಯಾಚರಣೆಯನ್ನು ಶನಿವಾರ ಪುನರಾರಂಭಿಸಲಾಗಿದೆ.
ನಾರಾಯಣಘಾಟ್-ಮುಗಲಿಂಗ್ ರಸ್ತೆಯ ಸಿಮಲ್ಟಾಲ್ ಪ್ರದೇಶದಲ್ಲಿ ಭೂಕುಸಿತ ಉಂಟಾಗಿ, ತ್ರಿಶೂಲಿ ನದಿಯಲ್ಲಿ 54 ಪ್ರಯಾಣಿಕರನ್ನು ಹೊತ್ತ ಎರಡು ಬಸ್ಗಳು ನಾಪತ್ತೆಯಾಗಿದ್ದವು. ಈ ಹಿಂದೆ ಎರಡು ಬಸ್ಗಳಲ್ಲಿ 60ಕ್ಕೂ ಹೆಚ್ಚು ಮಂದಿ ಇದ್ದರು ಎಂದು ವರದಿಯಾಗಿತ್ತು.
ನೇಪಾಳಿ ಸೇನೆ ಮತ್ತು ಶಸ್ತ್ರಸಜ್ಜಿತ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆಯನ್ನು ಪುನರಾರಂಭಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬಿರ್ಗುಂಜ್ನಿಂದ ಕಠ್ಮಂಡು ಕಡೆಗೆ ಹೋಗುತ್ತಿದ್ದ ಬಸ್ನಲ್ಲಿ 7 ಭಾರತೀಯರು ಸೇರಿದಂತೆ 24 ಜನರಿದ್ದರು ಮತ್ತು ಕಠ್ಮಂಡುವಿನಿಂದ ಗೌರ್ಗೆ ತೆರಳುತ್ತಿದ್ದ ಇನ್ನೊಂದು ಬಸ್ನಲ್ಲಿ 30 ಸ್ಥಳೀಯರು ಇದ್ದರು.
ಒಂದು ಬಸ್ನಲ್ಲಿದ್ದ ಮೂವರು ಪ್ರಯಾಣಿಕರು ಹೊರಗೆ ಜಿಗಿದು ಪಾರಾಗಿದ್ದಾರೆ. ಇನ್ನೂ 51 ಮಂದಿ ನಾಪತ್ತೆಯಾಗಿದ್ದು, ರಕ್ಷಣೆ ಮತ್ತು ಶೋಧ ಕಾರ್ಯ ಮುಂದುವರಿದಿದೆ ಎಂದು ನೇಪಾಳ ಪೊಲೀಸ್ ವಕ್ತಾರ ಡಾನ್ ಬಹದ್ದೂರ್ ಕರ್ಕಿ ಹೇಳಿದ್ದಾರೆ.
500ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ . ಶುಕ್ರವಾರ ರಾತ್ರಿ ನೀರಿನ ಹರಿವು ಹೆಚ್ಚಿದ್ದ ಕಾರಣ ಶೋಧ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು. ಶನಿವಾರ ಬೆಳಗ್ಗೆ 8 ಗಂಟೆಗೆ ಮತ್ತೆ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.