ಫತೇಪುರ: ಹಾವಿನ ದ್ವೇಷ 12 ವರ್ಷ ಅನ್ನುವ ಮಾತಿದೆ. ಇದು ಸತ್ಯವೋ ಸುಳ್ಳೋ ಬೇರೆ ಪ್ರಶ್ನೆ. ಕೆಲವು ಜಾಗಗಳಲ್ಲಿ ಹಾವುಗಳು ಪದೇ ಪದೇ ಕಾಣಿಸಿಕೊಳ್ಳುತ್ತವೆ. ಇದಕ್ಕೆ ಕಾರಣಗಳನ್ನೂ ಜನರು ಊಹಿಸಿಕೊಳ್ಳುತ್ತಾರೆ. ಆದರೆ ಉತ್ತರ ಪ್ರದೇಶದಲ್ಲಿ ವಿಚಿತ್ರ ಪ್ರಕರಣವೊಂದು ವರದಿಯಾಗಿದೆ. ಇಲ್ಲಿ 24 ವರ್ಷದ ಯುವಕನೊಬ್ಬನನ್ನು ಹಾವು ಬೆನ್ನತ್ತಿದೆ. ಆತನನ್ನು ಹುಡುಕಿಕೊಂಡು ಬಂದು ಕಚ್ಚುತ್ತಿದೆ.
ಫತೇಹ್ಪುರದ ವಿಕಾಸ್ ದುಬೆ ಎಂಬ ವ್ಯಕ್ತಿಗೆ ಕಳೆದ 40 ದಿನಗಳಲ್ಲಿ ಏಳು ಬಾರಿ ಹಾವು ಕಚ್ಚಿರುವ ವಿಚಿತ್ರ ಘಟನೆ ವರದಿಯಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಮುಖ್ಯ ವೈದ್ಯಕೀಯ ಅಧಿಕಾರಿ ರಾಜೀವ್ ನಯನ್ ಗಿರಿ, ಸಂತ್ರಸ್ತ ದುಬೆ ಅಧಿಕಾರಿಗಳಿಂದ ಆರ್ಥಿಕ ನೆರವಿಗೆ ಮನವಿ ಮಾಡಿದ್ದಾನೆ ಎಂದು ತಿಳಿಸಿದ್ದಾರೆ. ಆದರೆ ಇದು ಅವರಲ್ಲಿ ಹಲವು ಅನುಮಾನಗಳನ್ನೂ ಸೃಷ್ಟಿಸಿದೆ.
“ಕಲೆಕ್ಟರ್ ಕಚೇರಿಗೆ ಬಂದ ಯುವಕ, ಹಾವು ಕಡಿತಕ್ಕೆ ಚಿಕಿತ್ಸೆ ಪಡೆಯಲು ತಾನು ಸಾಕಷ್ಟು ಹಣ ಖರ್ಚು ಮಾಡಿರುವುದಾಗಿ ಕಣ್ಣೀರಿಟ್ಟಿದ್ದಾನೆ. ಅಧಿಕಾರಿಗಳಿಂದ ಹಣಕಾಸಿನ ನೆರವು ಒದಗಿಸುವಂತೆ ಆತ ಅಂಗಲಾಚಿದ್ದಾನೆ. ಸರ್ಕಾರಿ ಸ್ವಾಮ್ಯದ ಆಸ್ಪತ್ರೆಗೆ ತೆರಳುವಂತೆ, ಅಲ್ಲಿ ಹಾವು ಕಡಿತದ ವಿಷದಿಂದ ರಕ್ಷಣೆ ನೀಡುವ ಲಸಿಕೆಯನ್ನು ಉಚಿತವಾಗಿ ಪಡೆಯಬಹುದು ಎಂದು ನಾನು ಆತನಿಗೆ ಸಲಹೆ ನೀಡಿದ್ದೆ” ಎಂದು ರಾಜೀವ್ ಗಿರಿ ಹೇಳಿದ್ದಾರೆ.
ಅಧಿಕಾರಿಗಳಲ್ಲಿ ಅನುಮಾನ ಮೂಡಿಸಿದ ಘಟನೆ
ಇನ್ನೂ ವಿಚಿತ್ರದ ಸಂಗತಿ ಎಂದರೆ ವಿಕಾಸ್ ದುಬೆಗೆ ಏಳು ಬಾರಿಯೂ ಶನಿವಾರದಂದೇ ಹಾವು ಕಚ್ಚಿರುವುದು. ಇದು ಅಧಿಕಾರಿಗಳಲ್ಲಿಯೂ ಗೊಂದಲ ಮೂಡಿಸಿದೆ.
“ಆತನಿಗೆ ನಿಜಕ್ಕೂ ಹಾವು ಕಚ್ಚುತ್ತಿರುವುದೇ ಎನ್ನುವುದನ್ನು ನಾವು ಇನ್ನೂ ಖಚಿತಪಡಿಸಿಕೊಳ್ಳುವ ಪ್ರಯತ್ನದಲ್ಲಿದ್ದೇವೆ. ಆತನಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ಅರ್ಹತೆಯನ್ನು ಕೂಡ ನಾವು ಪರಿಶೀಲಿಸಬೇಕಾಗಿದೆ. ವ್ಯಕ್ತಿಯೊಬ್ಬನಿಗೆ ಪ್ರತಿ ಶನಿವಾರವೂ ಹಾವು ಕಚ್ಚುತ್ತಿರುವುದು ಹಾಗೂ ಆ ವ್ಯಕ್ತಿ ಪ್ರತಿ ಬಾರಿಯೂ ಅದೇ ಆಸ್ಪತ್ರೆಗೆ ದಾಖಲಾಗುವುದು ಮತ್ತು ಒಂದೇ ದಿನದಲ್ಲಿ ಚೇತರಿಸಿಕೊಳ್ಳುತ್ತಿರುವುದು ಬಹಳ ಅನುಮಾನಾಸ್ಪದವಾಗಿದೆ” ಎಂದು ಅವರು ಈ ಘಟನಾವಳಿಗಳಲ್ಲಿ ಬೇರೆ ಏನೋ ಸಂಚು ಇದೆ ಎಂದು ಶಂಕಿಸಿದ್ದಾರೆ.
ಈ ಪ್ರಕರಣದ ಬಗ್ಗೆ ತನಿಖೆ ನಡೆಸಲು ಮೂವರು ವೈದ್ಯರ ತಂಡವೊಂದನ್ನು ರಚಿಸಿರುವುದಾಗಿ ವೈದ್ಯಕೀಯ ಅಧಿಕಾರಿ ಹೇಳಿದ್ದಾರೆ.
“ಇದು ವಿಕ್ಷಿಪ್ತ ಪ್ರಕರಣ ಎನಿಸಿರುವ ಕಾರಣದಿಂದ ನಾವು ತನಿಖೆಗೆ ತಂಡವೊಂದನ್ನು ರಚಿಸುವ ಆಲೋಚನೆ ಮಾಡಿದ್ದೆವು. ಇದರ ತನಿಖೆ ಬಳಿಕ ನಾನು ಜನರಿಗೆ ಇದರ ಹಿಂದಿನ ಸತ್ಯವನ್ನು ತಿಳಿಸುತ್ತೇನೆ” ಎಂದು ತಿಳಿಸಿದ್ದಾರೆ.
ಅಧಿಕಾರಿಗಳ ಪ್ರಕಾರ, ವಿಕಾಸ್ ದುಬೆಗೆ ಪ್ರತಿ ಬಾರಿ ಹಾವು ಕಚ್ಚಿದಾಗಲೂ, ಒಂದೇ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ. ಚಿಕಿತ್ಸೆ ಪಡೆದ ಬಳಿಕ ಆತ ಚೇತರಿಸಿಕೊಂಡು ಮನೆಗೆ ಹೋಗಿದ್ದಾನೆ. ಆದರೆ ಆತ ಮತ್ತೆ ಹಾವು ಕಚ್ಚಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಇದು ಅಧಿಕಾರಿಗಳಲ್ಲಿ ಅಸಹಜ ಎನಿಸಿದೆ.