ಬೆಂಗಳೂರು: ಸುಂದರ ಸುಖ ಸಂಸಾರಕ್ಕೆ ಅದ್ಯಾರ ಕಣ್ಣು ಬಿತ್ತೊ ಏನೊ, ಕೈ ತುಂಬ ದುಡಿಯುತ್ತಿದ್ದ ಕುಟುಂಬ. ಚೆಂದದ ಮಕ್ಕಳು, ಎಲ್ಲವೂ ಚೆನ್ನಾಗಿಯೇ ಇತ್ತು ಎನ್ನುವಾಗ.. ಮನೆಯ ಯಜಮಾನನ ಹಠಾತ್ ಸಾವು, ಹೆಂಡ್ತಿ ಮಗನನ್ನ ಖಿನ್ನತೆಗೆ ತಳ್ಳಿ ಸಾವಿನ ಲೋಕಕ್ಕೆ ಕೊಂಡಿಯ್ದಿದೆ.
ಗಂಡ-ಹೆಂಡತಿ, ಇಬ್ಬರು ಮಕ್ಕಳು, ಚಿಕ್ಕದಾದ ಚೊಕ್ಕ ಸಂಸಾರ. ಕೋಲಾರ ಮೂಲದ ರಮ್ಯಾ ಹಾಗೂ ಆಂಧ್ರ ಪ್ರದೇಶದ ಪುಲಿವರ್ತಿ ಗ್ರಾಮದ ಶ್ರೀಧರ್, ವಿವಾಹವಾಗಿ ಹಲವು ವರ್ಷಗಳಿಂದ ಬೆಂಗಳೂರಿನ ಯಲಹಂಕದಲ್ಲಿ ವಾಸವಾಗಿದ್ರು. ಇವರಿಗೆ ಇಬ್ಬರು ಮುದ್ದಾದ ಮಕ್ಕಳಿದ್ದರು, ಒಳ್ಳೆಯ ವಿದ್ಯಾಭ್ಯಾಸ ಸಹ ಮಾಡುತ್ತಿದ್ದರು. ಪತಿ ಶ್ರೀಧರ್ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೈತುಂಬ ಸಂಬಳ ಬರ್ತಾ ಇತ್ತು. ಎಲ್ಲವು ಚೆನ್ನಾಗಿಯೇ ಇತ್ತು ಎನ್ನುವಾಗ ವಿಧಿ ಅನ್ನೋದು ಇವರ ಕುಟುಂಬಕ್ಕೆ ಬಹುದೊಡ್ಡ ಆಘಾತವನ್ನೇ ತಂದೊಡ್ಡಿದೆ.
ಕಳೆದ ಮೂರು ತಿಂಗಳ ಹಿಂದೆ ಕ್ಯಾನ್ಸರ್ನಿಂದ ಬಳಲುತ್ತಿದ್ದ ಶ್ರೀಧರ್, ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಗಂಡನ ಅಕಾಲಿಕ ಮರಣದಿಂದ ಪತ್ನಿ ರಮ್ಯಾಗೆ ಜೀವನ ನಿರ್ವಹಣೆ ಮಾಡೋದು ಸಂಕಷ್ಟದ ಹಂತ ತಲುಪಿತ್ತು. ಕುಟುಂಬಕ್ಕೆ ವರಮಾನವಿಲ್ಲದೇ ಮಕ್ಕಳ ವಿದ್ಯಾಭ್ಯಾಸಕ್ಕೂ ಕೊಡಲಿಪೆಟ್ಟು ಬಿದ್ದಿತ್ತು. ಮಗಳ ಕೋರ್ಸನ್ನು ಕೂಡ ಬದಲಾವಣೆ ಮಾಡಿದ್ದರು. ಆದ್ರೆ ಪತಿಯಿಲ್ಲದೇ ರಮ್ಯಾ ಕೊರಗ್ತಾ ಇದ್ರೆ ವಿದ್ಯಾಭ್ಯಾಸ ಹಾಗು ಮನೆಯ ಸಂಕಷ್ಟ ಕಂಡ ಮಗ ಭಾರ್ಗವ್ ಕೂಡ ಬಹಳಷ್ಟು ನೊಂದಿದ್ದ.
ಹೀಗೆ ನೊಂದುಕೊಂಡೆ ಜೀವನ ಮಾಡ್ತಾ ಇದ್ದ ಕುಟುಂಬ ಕೊನೆಗೆ ಕಟು ನಿರ್ಧಾರಕ್ಕೆ ಬಂದುಬಿಟ್ಟಿತ್ತು. ತಾವು ವಾಸಮಾಡಿಕೊಂಡಿದ್ದ ಯಲಹಂಕ ಗ್ಯಾಲರಿಯ ಅಪಾರ್ಟ್ ಮೆಂಟ್ ನಲ್ಲಿ ಮಗ ಭಾರ್ಗವ್ ಜೊತೆ ತಾಯಿ ರಮ್ಯಾ ಆತ್ಮಹತ್ಯೆ ಶರಣಾಗಿದ್ರು. ಇನ್ನು ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು, ನಿನ್ನೆ ದಿನ ಮಗಳು ಪಿಜಿಯಿಂದ ಮನೆಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.