ಹಾವೇರಿ:- ಬೈಕ್ ಕೊಡಿಸದಿದ್ದಕ್ಕೆ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾವೇರಿಯಲ್ಲಿ ಜರುಗಿದೆ. ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಕರೂರ ಗ್ರಾಮದಲ್ಲಿ ನಡೆದಿದೆ. ಬೈಕ್ ಕೊಡಿಸುವಂತೆ ತಂದೆ-ತಾಯಿ ಜತೆ ಜಗಳವಾಡಿದ ಬಳಿಕ ಯುವಕ ನೇಣಿಗೆ ಶರಣಾಗಿದ್ದಾನೆ. ಆದರೆ, ಮಗನ ಸಾವಿನಿಂದ ಮನನೊಂದ ತಾಯಿಯೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಧನರಾಜ ಸುರೇಶ ನಾಯಕ (18) ಹಾಗೂ ಭಾಗ್ಯಮ್ಮ ನಾಯಕ (43) ಆತ್ಮಹತ್ಯೆಗೆ ಶರಣಾದವರು. ಹರಿಹರದಲ್ಲಿ ಡಿಪ್ಲೊಮಾ ವ್ಯಾಸಂಗ ಮಾಡುತ್ತಿದ್ದ ಧನರಾಜ ಬೈಕ್ ತೆಗೆದುಕೊಳ್ಳಲು ಹಣ ಬೆಕೆಂದು ತಂದೆ-ತಾಯಿ ಬಳಿ ಬೆಳಗ್ಗೆ ಜಗಳ ತೆಗೆದಿದ್ದ. ಕೂಲಿ ಮಾಡಿಕೊಂಡಿರುವ ತಂದೆ ಸುರೇಶ ಬೈಕ್ಗೆ ನೀಡಲು ಹಣ ಇಲ್ಲವೆಂದು ಹೇಳಿದ್ದರಿಂದ ಅಡುಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹೀಗಾಗಿ ಮಗನ ಸ್ಥಿತಿ ಕಂಡು ದಂಗಾಗಿದ್ದ ತಾಯಿ, ಕರೂರ ರೈಲು ನಿಲ್ದಾಣದ ಬಳಿ ರೈಲು ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ