ಮುಂಬೈ: ರಕ್ತದ ಕ್ಯಾನ್ಸರ್ನಿಂದ ಬಳಲುತ್ತಿರುವ ಭಾರತದ ಮಾಜಿ ಕ್ರಿಕೆಟಿಗ ಹಾಗೂ ಮಾಜಿ ಮುಖ್ಯ ಕೋಚ್ ಅಂಶುಮಾನ್ ಗಾಯಕ್ವಾಡ್ ಅವರ ಚಿಕಿತ್ಸೆಗಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ 1 ಕೋಟಿ ರೂ. ಆರ್ಥಿಕ ನೆರವು ನೀಡುವುದಾಗಿ ಘೋಷಣೆ ಮಾಡಿದೆ.
ಲಂಡನ್ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಕ್ವಾಡ್ ಅವರಿಗೆ ತಕ್ಷಣವೇ ನಿಧಿ ಬಿಡುಗಡೆ ಮಾಡುವಂತೆ ಬಿಸಿಸಿಐ (BCCI) ಕಾರ್ಯದರ್ಶಿ ಜಯ್ ಶಾ ತಿಳಿಸಿದ್ದರು. ಅಲ್ಲದೇ ಗಾಯಕ್ವಾಡ್ ಅವರ ಕುಟುಂಬದ ಪರಿಸ್ಥಿತಿ ಪರಿಶೀಲಿಸಿ ನೆರವು ನೀಡಲಾಗುತ್ತಿದೆ. ಈ ಬಿಕ್ಕಟ್ಟಿನ ಸಮಯದಲ್ಲಿ ಬಿಸಿಸಿಐ ಗಾಯಕ್ವಾಡ್ ಕುಟುಂಬದೊಂದಿಗೆ ಇರಲಿದೆ. ಅವರ ತ್ವರಿತ ಚಿಕಿತ್ಸೆಗೆ ಅಗತ್ಯ ಸಹಾಯ ಮಾಡಲಿದೆ ಎಂದು ಸಹ ಹೇಳಿದ್ದರು. ಈ ಹಿನ್ನೆಲೆಯಲ್ಲಿ 1 ಕೋಟಿ ರೂ. ಆರ್ಥಿಕ ನೆರವು ನೀಡಲು ಘೋಷಿಸಿರುವುದಾಗಿ ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಗಾಯಕ್ವಾಡ್ ಅವರು ಟೀಂ ಇಂಡಿಯಾದ ಮಾಜಿ ನಾಯಕ ಡಿ.ಕೆ ಗಾಯಕ್ವಾಡ್ ಅವರ ಪುತ್ರ. ಪ್ರಸ್ತುತ ಅವರು ಲಂಡನ್ನ ಕಿಂಗ್ಸ್ ಕಾಲೇಜು ಆಸ್ಪತ್ರೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. 71 ವರ್ಷ ವಯಸ್ಸಿನ ಗಾಯಕ್ವಾಡ್ 1975 ಮತ್ತು 1987ರ ನಡುವೆ ಭಾರತ ಕ್ರಿಕೆಟ್ ತಂಡಕ್ಕಾಗಿ ಅಪಾರವಾಗಿ ಶ್ರಮಿಸಿದ್ದಾರೆ. 40 ಟೆಸ್ಟ್ ಮತ್ತು 15 ಏಕದಿನ ಪಂದ್ಯಗಳನ್ನಾಡಿದ್ದಾರೆ.