ಮಾದಕ ವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ರಕುಲ್ ಪ್ರೀತ್ ಸಿಂಗ್ ಸಹೋದರ ಅಮನ್ ಪ್ರೀತ್ ಸಿಂಗ್ ಅವರನ್ನ ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ.
ಸೈಬರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ನಾರ್ಕೋಟಿಕ್ಸ್ ಬ್ಯೂರೋ ಮತ್ತು ರಾಜೇಂದ್ರ ನಗರ ಎಸ್ಒಟಿ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಐವರು ಡ್ರಗ್ಸ್ ಪೆಡ್ಲರ್ ಗಳನ್ನು ಬಂಧಿಸಿದ್ದು, ಅವರಿಂದ 35 ಲಕ್ಷ ರೂಪಾಯಿ ಮೌಲ್ಯದ ಸುಮಾರು 200 ಗ್ರಾಂ ಕೊಕೇನ್ ವಶಪಡಿಸಿಕೊಂಡಿದ್ದಾರೆ.
ಡ್ರಗ್ಸ್ ಸೇವಿಸಿದ ಆರೋಪದ ಮೇಲೆ ಅಮನ್ ಪ್ರೀತ್ ಅವರನ್ನು ಬಂಧಿಸಲಾಗಿದೆ. ಅವರು ಡ್ರಗ್ ಸೇವನೆ ಮಾಡಿರುವುದು ಪರೀಕ್ಷೆಯಲ್ಲಿ ದೃಢಪಟ್ಟಿದೆ ಎಂದು ಹೈದರಾಬಾದ್ ಪೊಲೀಸರು ಖಚಿತಪಡಿಸಿದ್ದಾರೆ. ಮೂಲಗಳ ಪ್ರಕಾರ, ಅಮನ್ ಪ್ರೀತ್ ನಾಲ್ವರು ನೈಜೀರಿಯನ್ನರಿಂದ ಕೊಕೇನ್ ಖರೀದಿಸುತ್ತಿದ್ದರು. ಈ ವೇಳೆ ಅವರನ್ನ ಬಂಧಿಸಲಾಗಿದೆ.
ಈ ಹಿಂದೆ ಮಾದಕ ವಸ್ತು ಸೇವನೆ ಪ್ರಕರಣ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ರಕುಲ್ ಪ್ರೀತ್ ಸಿಂಗ್ ಸಹ ವಿಚಾರಣೆ ಎದುರಿಸಿದ್ದರು. ಹಲವು ಬಾರಿ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿತ್ತು. ಸದ್ಯ ರಕುಲ್ ಸಹೋದರನನ್ನು ಬಂಧಿಸಿರುವ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.