ಬೆಂಗಳೂರು: ಮಾ.17. ಕನ್ನಡ ನಾಡಿನ ಜನಪ್ರಿಯ ನಟರಾದ ಶ್ರೀ ಪುನೀತ್ ರಾಜಕುಮಾರ್ ಅವರು ಚಲನಚಿತ್ರ ಜೊತೆಗೆ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದಾರೆ. ಅವರ ಸಾಧನೆಯ ಹಾದಿಯಲ್ಲಿ ನಡೆಯೋಣ ಎಂದು ಸ್ಥಳೀಯ ಶಾಸಕರು ಹಾಗೂ ಅಬಕಾರಿ ಸಚಿವರಾದ ಕೆ.ಗೋಪಾಲಯ್ಯನವರು ತಿಳಿಸಿದರು
ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಕುರುಬರಹಳ್ಳಿಯ ಕಾವೇರಿನಗರದಲ್ಲಿ ನಡೆದ ಕರ್ನಾಟಕ ರತ್ನ ಡಾ.ಪುನೀತ್ ರಾಜಕುಮಾರ್ ಅವರ 49ನೇ ವರ್ಷದ ಜಯಂತಿ ಕಾರ್ಯಕ್ರಮವನ್ನು ಕೇಕ್ ಕತ್ತರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಪುನೀತ್ ರಾಜಕುಮಾರ್ ಅವರು ಬೆಟ್ಟದ ಹೂ, ಅಪ್ಪು, ಮಿಲನ, ಆಕಾಶ್, ಅರಸು, ರಾಜಕುಮಾರ ಸೇರಿದಂತೆ ಅತ್ಯುತ್ತಮ ಚಲನಚಿತ್ರಗಳಲ್ಲಿ ಅಭಿನಯಿಸಿ ತಮ್ಮ ಕೋಟ್ಯಾಂತರ ಅಭಿಮಾನಿಗಳಿಗೆ ಮನೋರಂಜನೆಯ ರಸದೌತಣವನ್ನು ಉಣಬಡಿಸಿದ್ದಾರೆ ಎಂದರು.
ಪುನೀತ್ ರಾಜಕುಮಾರ್ ಅವರು ಇಂದು ನಮ್ಮ ನಡುವೆ ಇಲ್ಲದೆ ಇರಬಹುದು ಆದರೆ ಅವರ ನೆನಪುಗಳು ಸದಾ ನಮ್ಮೊಂದಿಗೆ ಇರುತ್ತವೆ. ಸಿನಿಮಾ, ಸಮಾಜಸೇವೆ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದರೆ ತಪ್ಪಿಲ್ಲ. ಅವರ ಜಯಂತಿಯ ಈ ಸುದಿನದಂದು ಅವರನ್ನು ನೆನಪು ಮಾಡಿಕೊಳ್ಳುತ್ತಾ ಜಯಂತಿಯನ್ನು ಆಚರಿಸೋಣ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಎಂ ಎಲ್ ಸಿ ಲಕ್ಷ್ಮೀನಾರಾಯಣ್, ಜಿಲ್ಲಾ ಬಿಜೆಪಿ ಉತ್ತರ ಘಟಕದ ಉಪಾಧ್ಯಕ್ಷ ಜಯರಾಮ್, ಮಂಡಲದ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ವಾರ್ಡ್ ಅಧ್ಯಕ್ಷ ಮಂಜುನಾಥ್, ನಿಸರ್ಗ ಜಗದೀಶ್, ಶ್ರೀನಿವಾಸ್ ಸೇರಿದಂತೆ ಬಿಜೆಪಿಯ ಸ್ಥಳೀಯ ಮುಖಂಡರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.