ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ರಷ್ಯಾ ರಾಜಧಾನಿ ಮಾಸ್ಕೊಕ್ಕೆ ಭೇಟಿ ನೀಡಿದ್ದರು. ಈ ಬಗ್ಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಟೀಕಿಸಿದ್ದು ಝೆಲೆಸ್ಕಿ ಟೀಕೆಯ ಬಗ್ಗೆ ಭಾರತ ಅಸಮಾಧಾನ ವ್ಯಕ್ತಪಡಿಸಿದೆ ಎಂದು ರಾಜತಾಂತ್ರಿಕ ಮೂಲಗಳು ತಿಳಿಸಿವೆ.
ಝೆಲೆನ್ಸ್ಕಿ ಟೀಕೆಗಳ ಬಗ್ಗೆ ದೆಹಲಿಯಲ್ಲಿರುವ ಉಕ್ರೇನ್ನ ರಾಯಭಾರ ಕಚೇರಿಯಲ್ಲಿ ಭಾರತ ಅಸಮಾಧಾನ ವ್ಯಕ್ತಪಡಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಕ್ರೇನ್ನಲ್ಲಿ ಯುದ್ಧ ನಡೆಯುತ್ತಿರುವ ಸಂದರ್ಭದಲ್ಲೇ ರಷ್ಯಾ ರಾಜಧಾನಿ ಮಾಸ್ಕೊಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದರು. ಈ ಕುರಿತು ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿದ್ದ ಝೆಲೆನ್ಸ್ಕಿ, ಮೋದಿಯವರ ಮಾಸ್ಕೊ ಭೇಟಿಯನ್ನು ‘ದೊಡ್ಡ’ ನಿರಾಸೆ ಮತ್ತು ಶಾಂತಿ ಪ್ರಯತ್ನಗಳಿಗೆ ‘ವಿನಾಶಕಾರಿ ಹೊಡೆತ’ ಬಿದ್ದಿದೆ ಎಂದು ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ಕ್ಷಿಪಣಿ ದಾಳಿ ಬಗ್ಗೆ ಉಲ್ಲೇಖಿಸಿದ್ದರು.
‘ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ನಾಯಕ ಮಾಸ್ಕೊದಲ್ಲಿ ವಿಶ್ವದ ಅತ್ಯಂತ ರಕ್ತಸಿಕ್ತ ಅಪರಾಧಿಯನ್ನು ತಬ್ಬಿಕೊಳ್ಳುವುದನ್ನು ನೋಡಲು ಬೇಸರವಾಗುತ್ತಿದೆ. ಶಾಂತಿಯ ಪ್ರಯತ್ನಗಳಿಗೆ ಭಾರಿ ನಿರಾಸೆ ಮೂಡಿಸುವುದರ ಜೊತೆಗೆ ವಿನಾಶಕಾರಿ ಹೊಡೆತ ಬಿದ್ದಂತಾಗಿದೆ’ ಎಂದು ಝೆಲೆನ್ಕಿ ಟ್ವೀಟ್ ಮಾಡಿದ್ದರು.
22ನೇ ಭಾರತ-ರಷ್ಯಾ ವಾರ್ಷಿಕ ಸಭೆಗಾಗಿ ಪ್ರಧಾನಿ ಮೋದಿಯವರು ಜುಲೈ 8 ಮತ್ತು 9ರಂದು ರಷ್ಯಾಕ್ಕೆ ಭೇಟಿ ನೀಡಿದ್ದರು. ಶೃಂಗಸಭೆಯ ಮಾತನಾಡಿದ್ದ ಮೋದಿ, ‘ಶಾಂತಿ ಸ್ಥಾಪನೆಗೆ ಹೆಚ್ಚಿನ ಮಹತ್ವ ನೀಡಬೇಕು. ಯುದ್ಧಗಳಿಂದ ಸಮಸ್ಯೆಗಳಿಗೆ ಪರಿಹಾರ ಸಿಗುವುದಿಲ್ಲ’ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರಿಗೆ ಕಿವಿಮಾತು ಹೇಳಿದ್ದರು.
‘ಮುಂದಿನ ಪೀಳಿಗೆಯ ಉಜ್ವಲ ಭವಿಷ್ಯಕ್ಕಾಗಿ ಶಾಂತಿ ಸ್ಥಾಪನೆ ಪ್ರಕ್ರಿಯೆಗೆ ಆದ್ಯತೆ ನೀಡಬೇಕು ಎಂದು ಒಬ್ಬ ಸ್ನೇಹಿತನಾಗಿ ನಾನು ಪುಟಿನ್ ಅವರಿಗೆ ಹೇಳಿದ್ದೇನೆ’ ಎಂದು ಮೋದಿ ತಿಳಿಸಿದ್ದರು.