ಬೆಂಗಳೂರು: ಎನ್ಸಿಸಿ ಕೆಡೆಟ್ಗಳು ರಾಷ್ಟ್ರ ಮತ್ತು ಸಾರ್ವಜನಿಕ ಸೇವೆಗಾಗಿ ನಿರಂತರವಾಗಿ ತೊಡಗಿಸಿಕೊಳ್ಳಲಿ ಎಂದು ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಕರೆ ನೀಡಿದ್ದಾರೆ
ಇಂಟರ್ ಡೈರೆಕ್ಟರೇಟ್ ಸ್ಪೋರ್ಟ್ ಶೂಟಿಂಗ್ ಚಾಂಪಿಯನ್ಶಿಪ್-2024ರಲ್ಲಿ ಭಾಗವಹಿಸಿದ ಕರ್ನಾಟಕ ಮತ್ತು ಗೋವಾದ ಎನ್ಸಿಸಿ ಕೆಡೆಟ್ಗಳಿಗೆ ರಾಜಭವನದ ಬಾಂಕ್ವೆಟ್ ಸಭಾಂಗಣದಲ್ಲಿ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಇಂಟರ್ ಡೈರೆಕ್ಟರೇಟ್ ಸ್ಪೋರ್ಟ್ ಶೂಟಿಂಗ್ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಿ ಅತ್ಯುತ್ತಮ ಪ್ರದರ್ಶನ ನೀಡಿ, ಪ್ರಶಸ್ತಿ ಗಳಿಸಿದ ಕರ್ನಾಟಕ ಮತ್ತು ಗೋವಾ ಎನ್ಸಿಸಿ ನಿರ್ದೇಶನಾಲಯದ ಎನ್ಸಿಸಿ ಕೆಡೆಟ್ ಶೂಟಿಂಗ್ ತಂಡಕ್ಕೆ ಅಭಿನಂದಿಸಿದ ರಾಜ್ಯಪಾಲರು, ಯುವ ಕೆಡೆಟ್ಗಳು ಚಾಂಪಿಯನ್ಶಿಪ್ನಲ್ಲಿ ಶ್ಲಾಘನೀಯ ಪ್ರದರ್ಶನ ನೀಡುವ ಮೂಲಕ ಇಡೀ ಕರ್ನಾಟಕ ರಾಜ್ಯವನ್ನು ಹೆಮ್ಮೆಪಡುವಂತೆ ಮಾಡಿದ್ದಾರೆ ಎಂದು ಶ್ಲಾಘಿಸಿದರು.
ಎನ್ಸಿಸಿ ಒಂದು ಸ್ಪಂದಿಸುವ, ನಿರಂತರ ಕಲಿಕೆ ಮತ್ತು ವಿಕಸನಗೊಳ್ಳುತ್ತಿರುವ ಸಂಸ್ಥೆಯಾಗಿದೆ. ಅದರ ಧ್ಯೇಯವಾಕ್ಯ ‘ಏಕತೆ ಮತ್ತು ಶಿಸ್ತು’. ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ ನಮ್ಮ ದೇಶದ ಅತಿದೊಡ್ಡ ಶಿಸ್ತಿನ ಯುವ ಸಂಘಟನೆಯಾಗಿದೆ. ಇದು ಪ್ರಾರಂಭದಿಂದಲೂ ಭದ್ರತೆ ಮತ್ತು ಸೇವೆಗಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ ಸಶಸ್ತ್ರ ಪಡೆಗಳಿಗೆ ಸೇರಲು ಯುವ ಭಾರತೀಯರನ್ನು ಪ್ರೇರೇಪಿಸಲು ಅನುಕೂಲಕರ ವಾತಾವರಣವನ್ನು ಒದಗಿಸುತ್ತದೆ. ನ್ಯಾಷನಲ್ ಕೆಡೆಟ್ ಕಾರ್ಪ್ಸ್ ಅನೇಕ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ದೇಶ ಮತ್ತು ವಿಶ್ವದಲ್ಲಿ ಕಾರ್ಪ್ಸ್ ಹೆಮ್ಮೆಪಡುವಂತೆ ಮಾಡಿದೆ. ಜೊತೆಗೆ ಅನೇಕ ಗೌರವ ಮತ್ತು ಪ್ರಶಸ್ತಿಗಳನ್ನು ಪಡೆದಿದೆ ಎಂದು ಪ್ರಶಂಸಿಸಿದರು