ಕಾರವಾರ: ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಶಿರೂರು ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಗುಡ್ಡ ಕುಸಿತ ಪ್ರಕರಣದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 5 ಲಕ್ಷ ಪರಿಹಾರವನ್ನುಸಿ ಎಂ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಸಿಎಂ ಅವರು, ಅಂಕೋಲಾ ಗುಡ್ಡ ಕುಸಿತ ಪ್ರಕರಣದಲ್ಲಿ ಏಳು ಮಂದಿ ಮಣ್ಣಿನ ಅಡಿ ಸಿಲುಕಿ ಮೃತಪಟ್ಟಿರುವ ಸಾಧ್ಯತೆ ಇದ್ದು, ಈಗಾಗಲೇ 4 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಇದು ಅತ್ಯಂತ ದುರದೃಷ್ಟಕರ ಘಟನೆ. ಮೃತ ದುರ್ದೈವಿಗಳ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಘಟನೆಯಲ್ಲಿ ಮೃತಪಟ್ಟವರಿಗೆ ತಲಾ 5 ಲಕ್ಷ ಪರಿಹಾರ ಘೋಷಣೆ ಮಾಡಲಾಗಿದೆ. ನಿರಂತರ ಮಳೆಯ ನಡುವೆಯೂ ರಕ್ಷಣಾ ಕಾರ್ಯಾಚರಣೆಯನ್ನೂ ಮುಂದುವರೆಸಲಾಗುತ್ತಿದ್ದು, ಉಳಿದ ಮೂವರಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಕಾರವಾರದ ಕಿನ್ನರ ಗ್ರಾಮದಲ್ಲಿ ಮನೆ ಕುಸಿದು ವೃದ್ಧ ಸಾವು ಪ್ರಕರಣದ ಹಿನ್ನೆಲೆಯಲ್ಲಿ ಮೃತರ ಕುಟುಂಬಸ್ಥರಿಗೆ ಸಚಿವ ಮಂಕಾಳು ವೈದ್ಯ ಅವರು ಪರಿಹಾರದ ಆದೇಶ ಪತ್ರ ವಿತರಿಸಿದರು.
ನಿನ್ನೆ ಸುರಿದ ಧಾರಾಕಾರ ಮಳೆಗೆ ಕಿನ್ನರ ಗ್ರಾಮದಲ್ಲಿ ಗುಡ್ಡ ಕುಸಿದು ಮನೆಗೆ ಹಾನಿಯಾಗಿತ್ತು. ಮನೆಯಲ್ಲಿದ್ದ ವೃದ್ಧ ತಿಕರ್ಸ್ ಗುರವ(60) ಗೋಡೆಯಡಿ ಸಿಲುಕಿ ಮೃತಪಟ್ಟಿದ್ದರು. ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೃತದೇಹ ಹೊರತೆಗೆದಿದ್ದರು. ಇಂದು ಕಾರವಾರಕ್ಕೆ ಆಗಮಿಸಿದ ವೇಳೆ ಪರಿಹಾರದ ಆದೇಶಪತ್ರವನ್ನು ಸಚಿವರು ಹಸ್ತಾಂತರಿಸಿದರು.
ಏನಿದು ಘಟನೆ?
ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಗೆ ರಾಷ್ಟ್ರೀಯ ಹೆದ್ದಾರಿ 66ರ ಶಿರೂರು ಬಳಿ ಭಾರೀ ಗುಡ್ಡಕುಸಿತ ಉಂಟಾಗಿತ್ತು. ಗುಡ್ಡದ ಮಣ್ಣಿನಡಿ 7 ಮಂದಿ ಸಿಲುಕಿ ಮೃತಪಟ್ಟಿದ್ದಾರೆ ಎನ್ನಲಾಗಿದ್ದು, ಐವರ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಗುಡ್ಡ ಕುಸಿದ ರಭಸಕ್ಕೆ ನದಿಗೆ 2 ಗ್ಯಾಸ್ ಟ್ಯಾಂಕರ್ಗಳು ಕೊಚ್ಚಿ ಹೋಗಿದ್ದವು. ಗುಡ್ಡದ ಕೆಳಗಿದ್ದ ಲಾರಿ, ಮತ್ತೊಂದು ಟ್ಯಾಂಕರ್ ಹಾಗೂ ಚಾಲಕರು ಪಾರಾಗಿದ್ದರು. ತುರ್ತು ಕಾರ್ಯಾಚರಣೆಗೆ ಪೊಲೀಸರು ಧಾವಿಸಿದ್ದು. ಸ್ಥಳದ ಪರಿಸ್ಥಿತಿ ಭೀಕರವಾಗಿದ್ದು, ಹೆದ್ದಾರಿ ಸಂಪೂರ್ಣ ಕತ್ತರಿಸಿಹೋಗಿ ಈ ರಸ್ತೆಯಲ್ಲಿ ವಾಹನ ಸಂಚಾರ ನಿಂತೇ ಹೋಗಿದೆ, ಇದನ್ನು ಸರಿಪಡಿಸಲು ವಾರವಾದರೂ ಬೇಕು ಎಂದು ಕಾರ್ಯಾಚರಣೆ ನಿರತರ ಅಭಿಪ್ರಾಯ. ಎಡೆಬಿಡದೆ ಸುರಿಯುತ್ತಿರುವ ಮಳೆ, ತೆರವು ಕಾರ್ಯಾಚರಣೆಯನ್ನು ಇನ್ನಷ್ಟು ಕಷ್ಟಗೊಳಿಸಿದೆ.
ಗುಡ್ಡದ ಮಣ್ಣು ತೆರವು ಕಾರ್ಯಾಚರಣೆ ನಡೆಯುತ್ತಿದ್ದು, ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಕಾರ್ಯಾಚರಣೆಗೆ ಅಡಚಣೆಯಾಗಿದೆ. ಇನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ 66 (ಗೋವಾ-ಮಂಗಳೂರು) ಹೆದ್ದಾರಿ ಸಂಪರ್ಕ ಸ್ಥಗಿತ ಹಿನ್ನೆಲೆಯಲ್ಲಿ ಲಾರಿಗಳು ಐದಾರು ಕಿ.ಮೀ ದೂರದಷ್ಟು ನಿಂತಲ್ಲೇ ನಿಂತಿವೆ. ಇದರಿಂದ ದೂರದ ರಾಜ್ಯಗಳಿಂದ ಬಂದ ಲಾರಿ ಚಾಲಕರು ಊಟ, ನೀರು ಸಿಗದೇ ಪರದಾಡುತ್ತಿದ್ದಾರೆ.