ಇನ್ನು ಭಾರತ ತಂಡ ಮುಂದಿನ ವರ್ಷ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಗಮನದಲ್ಲಿಟ್ಟು, ಶ್ರೀಲಂಕಾ ಪ್ರವಾಸದಲ್ಲಿ ಒಡಿಐ ಕ್ರಿಕೆಟ್ ಸರಣಿಯಾಡಲು ಮುಂದಾಗುತ್ತಿದೆ. ಆದರೆ, ಈ ಮಹತ್ವದ ಪ್ರವಾಸದಿಂದ ಹಾರ್ದಿಕ್ ಹಿಂದೆ ಸರಿಯಲು ನಿರ್ಧರಿಸಿದ್ದಾರೆ ಎಂಬುದು ವರದಿಗಳ ಮೂಲಕ ತಿಳಿದುಬಂದಿದೆ.
ಟಿ20 ವಿಶ್ವಕಪ್ ಬಳಿಕ ಹಾರ್ದಿಕ್ ಪಾಂಡ್ಯ ವಿಶ್ರಾಂತಿ ತೆಗೆದುಕೊಂಡಿದ್ದಾರೆ. ಜಿಂಬಾಬ್ವೆ ಪ್ರವಾಸದಿಂದಲೂ ಅವರನ್ನು ಹೊರಗಿಡಲಾಗಿತ್ತು. ಇದೀಗ ಜುಲೈ 26ರಂದು ಶ್ರೀಲಂಕಾ ವಿರುದ್ಧದ ಸೀಮಿತ ಓವರ್ಗಳ ಕ್ರಿಕೆಟ್ ಸರಣಿ ಶುರುವಾಗಲಿದೆ. ಭಾರತ ತಂಡ ಈ ಪ್ರವಾಸದಲ್ಲಿ ಆತಿಥೇಯರ ಎದುರು ತಲಾ 3 ಪಂದ್ಯಗಳ ಟಿ20-ಐ ಮತ್ತು ಒಡಿಐ ಕ್ರಿಕೆಟ್ ಸರಣಿಗಳನ್ನು ಆಡಲಿದೆ. ಹಾರ್ದಿಕ್ಚ ಟಿ20 ಕ್ರಿಕೆಟ್ ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿ, ಬಳಿಕ ಒಡಿಐ ಕ್ರಿಕೆಟ್ ಸರಣಿಯಿಂದ ವಿಶ್ರಾಂತಿ ಪಡೆದಿದ್ದಾರೆ. ವೈಯಕ್ತಿಕ ಕಾರಣ ಕೊಟ್ಟು ವಿಶ್ರಾಂತಿ ತೆಗೆದುಕೊಳ್ಳಲು ಬಯಸಿದ್ದಾರೆ ಎಂದು ವರದಿಯಾಗಿದೆ.
ಟೀಮ್ ಇಂಡಿಯಾದಲ್ಲಿ ಬದಲಾವಣೆಯ ಪರ್ವ ಈಗ ಶುರುವಾಗಿದೆ. ಟಿ20 ವಿಶ್ವಕಪ್ ಗೆಲುವಿನ ಬಳಿಕ ಅನುಭವಿಗಳಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ರವೀಂದ್ರ ಜಡೇಜಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಅವರ ಜಾಗ ತುಂಬಲು ಈಗ ಯುವ ಆಟಗಾರರಲ್ಲಿ ಪೈಪೋಟಿ ನಡೆಯುತ್ತಿದೆ. ಇನ್ನು ಕೋಚಿಂಗ್ ಬಳಗದಲ್ಲೂ ಈಗ ಬದಲಾವಣೆ ಆಗಿದೆ. ರಾಹುಲ್ ದ್ರಾವಿಡ್ ಅವರ ಅಧಿಕಾರ ಅವಧಿ ವಿಶ್ವಕಪ್ ಜಯದೊಂದಿಗೆ ಅಂತ್ಯಗೊಂಡಿದ್ದು, ಮಾಜಿ ಆರಂಭಿಕ ಬ್ಯಾಟರ್ ಗೌತಮ್ ಗಂಭೀರ್ ಹೊಸ ಕೋಚ್ ಆಗಿ ನೇಮಕಗೊಂಡಿದ್ದಾರೆ. ಜೊತೆಗೆ ಹೊಸ ಕೋಚಿಂಗ್ ಬಳಗದ ರಚನೆಯಲ್ಲಿ ತೊಡಗಿದ್ದಾರೆ.