ಬೆಂಗಳೂರು:- ಲಾಲ್ಬಾಗ್ ಫಲಪುಷ್ಪ ಪ್ರದರ್ಶನದಲ್ಲಿ ಈ ಬಾರಿ ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ಅವರ ಜೀವನಗಾಥೆ ನೋಡುಗರನ್ನು ರಂಜಿಸಲಿದೆ. ಆಗಸ್ಟ್ 8ರಿಂದ 19 ರವರೆಗೆ ಫಲಪುಷ್ಪ ಪ್ರದರ್ಶನ ಜನರನ್ನು ಸೆಳೆಯಲಿದೆ
ಲಾಲ್ಬಾಗ್ನಲ್ಲಿ ಆಗಸ್ಟ್ನಲ್ಲಿ ನಡೆಯುವ ಫಲಪುಷ್ಪ ಪ್ರದರ್ಶನ ವೀಕ್ಷಿಸಲು ಜನ ಕಾತರದಿಂದ ಕಾಯುತ್ತಾರೆ. ಪ್ರತಿ ವರ್ಷ ವಿಭಿನ್ನ ಥೀಮ್ನಲ್ಲಿ ಫ್ಲವರ್ ಶೋ ಆಯೋಜಿಸುವ ಮೂಲಕ ಲಾಲ್ಬಾಗ್ಗೆ ಅಸಂಖ್ಯಾತ ಜನರನ್ನು ಆಕರ್ಷಿಸಲಾಗುತ್ತದೆ. ಈ ವರ್ಷ ಕೂಡ ಸ್ವಾತಂತ್ರ್ಯ ದಿನಾಚರಣೆಯ ಸಲುವಾಗಿ ಲಾಲ್ಬಾಗ್ನಲ್ಲಿ ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ಅವರ ಜೀವನ ಗಾಥೆಯನ್ನು ಬಿಂಬಿಸುವ ಪುಷ್ಪ ಪ್ರದರ್ಶನ ಆಯೋಜಿಸಲಾಗುತ್ತಿದ್ದು, ವಿದೇಶಿ ಹಾಗೂ ಸ್ವದೇಶಿ ಹೂಗಳಿಂದ ಈ ಬಾರಿಯ ಫ್ಲವರ್ ಶೋ ಕಂಗೊಳಿಸಲಿದೆ
ಲಾಲ್ಬಾಗ್ನಲ್ಲಿ ನಡೆಯಲಿರುವ ಫ್ಲವರ್ ಶೋಗೆ ಸುಮಾರು 3 ಕೋಟಿ ರೂಪಾಯಿ ವೆಚ್ಚವಾಗಲಿದೆ. ಈಗಾಗಲೇ ಸಿದ್ಧತೆಗಳನ್ನು ಆರಂಭಿಸಿದ್ದು, ಹೂಗಳ ಆಯ್ಕೆ ನಡೆಯುತ್ತಿದೆ. ಎಂದಿನಂತೆ ಆಂಥೋರಿಯಂ, ಲಿಲ್ಲಿ, ಆರ್ಕಿಡ್, ಜರ್ಬೆರಾ, ಸೇವಂತಿಗೆ, ನಂದಿ ಗಿರಿಧಾಮದ ಇಂಪೇಷನ್ಸ್ ಹೂಗಳು, ರೆಡ್ಹಾಟ್ ಪೋಕರ್, ಆಲ್ಸ್ಟೋಮೇರಿಯನ್ ಲಿಲ್ಲಿ, ಪೂಷಿಯಾ, ಅಗಪಾಂಥಸ್, ಸೈಕ್ಲೋಮನ್, ಕ್ಯಾಲಾಲಿಲ್ಲಿ, ಸುಗಂಧ ರಾಜ ಮುಂತಾದ ಹೂಗಳಿಂದ ಅಂಬೇಡ್ಕರ್ ಅರಳಲಿದ್ದಾರೆ. 10-12 ದೇಶಗಳಿಂದ ಹೂಗಳನ್ನು ತರಿಸಿಕೊಳ್ಳಲಾಗುತ್ತದೆ. ಕೊಲಂಬಿಯಾ, ನೆದರ್ ಲ್ಯಾಂಡ್ಸ್, ಬೆಲ್ಜಿಯಂ, ಕೀನ್ಯಾ, ಆಸ್ಟ್ರೇಲಿಯಾದಿಂದ ಹೂಗಳು ಲಾಲ್ಬಾಗ್ಗೆ ಆಗಮಿಸಲಿವೆ.
ಇದಲ್ಲದೇ ವಿವಿಧ ಬಗೆಯ ಆಕರ್ಷಕ ಬೋನ್ಸಾಯ್, ಇಕೆಬಾನ ಹಾಗೂ ತರಕಾರಿ ಕೆತ್ತನೆ ಪ್ರದರ್ಶನ, ತೋಟಗಳ ಸ್ಪರ್ಧೆ ಮತ್ತು ನಾನಾ ಹೂವಿನ ಜೋಡಣೆ ಕಲೆಗಳ ಪ್ರದರ್ಶನವೂ ಇರಲಿದೆ. ಸಧ್ಯ ಒಂದೊಂದೇ ವಿದೇಶಿ ಹೂಗಳನ್ನು ತರಿಸಿಕೊಳ್ಳಲಾಗುತ್ತಿದೆ ಎಂದು ಲಾಲ್ಬಾಗ್ ನಿರ್ದೇಶಕ ರಮೇಶ್ ತಿಳಿಸಿದ್ದಾರೆ