ಡೆಹ್ರಾಡೂನ್ : ಉತ್ತರಾಖಂಡದ ಹಿಂದೂಗಳ ಪವಿತ್ರ ಚಾರ್ಧಾಮ್ ಕ್ಷೇತ್ರಗಳಲ್ಲೊಂದಾದ ಕೇದಾರನಾಥ ದೇವಾಲಯದ ಚಿನ್ನ ಕಳುವಾಗಿದೆ ಎನ್ನುವ ಆರೋಪದ ಬಗ್ಗೆ ದೇವಾಲಯದ ಆಡಳಿತ ಮಂಡಳಿ ಸ್ಪಷ್ಟನೆಯನ್ನು ನೀಡಿದೆ. ಶ್ರೀಗಳ ಆರೋಪ ದುರದೃಷ್ಟಕರ ಎಂದು ಹೇಳಿದೆ.
ಭಗವಾನ್ ಶಿವನ 12 ಜ್ಯೋತಿರ್ಲಿಂಗಗಳಲ್ಲೇ ಪರಮ ಪವಿತ್ರ ಕ್ಷೇತ್ರವೆಂದೇ ಗುರುತಿಸಲ್ಪಡುವ ಕೇದಾರನಾಥ ದೇವಾಲಯದ 228 ಕೆಜಿ ಚಿನ್ನ ನಾಪತ್ತೆಯಾಗಿದೆ ಎಂದು ಜ್ಯೋತಿರ್ಮಠದ ಅವಿಮುಕ್ತೇಶ್ವರಾನಂದ ಶಂಕರಾಚಾರ್ಯ ಸ್ವಾಮೀಜಿ ಹೇಳಿದ್ದರು.
ಇದು, ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿತ್ತು.
ಕೇದಾರನಾಥ ದೇವಾಲಯದ 228 ಕೆ.ಜಿ ಚಿನ್ನ ನಾಪತ್ತೆಯಾಗಿದೆ, ಯಾರು ಈ ಬಗ್ಗೆ ಮಾತನಾಡುತ್ತಿಲ್ಲ. ಈವರೆಗೆ ಯಾವುದೇ ತನಿಖೆಯೂ ಆಗಿಲ್ಲ. 228 ಕೆ.ಜಿ ಚಿನ್ನ ನಾಪತ್ತೆ, ಇದೊಂದು ದೊಡ್ದ ಹಗರಣ, ಇದಕ್ಕೆ ಯಾರು ಜವಾಬ್ದಾರಿ ” ಎಂದು ಅವಿಮುಕ್ತೇಶ್ವರಾನಂದ ಶ್ರೀಗಳು ಹೇಳಿದ್ದರು.
ಸ್ವಾಮೀಜಿಗಳ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕೇದಾರನಾಥ – ಬದರೀನಾಥ ದೇವಾಲಯ ಸಮಿತಿಯ ಅಧ್ಯಕ್ಷ ಅಜೇಂದ್ರ ಅಜಯ್, ” ಅವಿಮುಕ್ತೇಶ್ವರಾನಂದ ಸ್ವಾಮೀಜಿಗಳ ಆರೋಪ ಬಹಳ ಬೇಸರ ತಂದಿದೆ. ಸ್ವಾಮೀಜಿಗಳು ನಿಜಾಂಶವನ್ನು ಭಕ್ತರ ಮುಂದೆ ಇಡಲಿ ” ಎಂದು ಒತ್ತಾಯಿಸಿದ್ದಾರೆ.