ಉತ್ತರ ಪ್ರದೇಶದ 13 ವಿಧಾನಸಭೆಗಳಿಗೆ ಉಪ ಚುನಾವಣೆ ಬೆನ್ನಲ್ಲೇ ಸಚಿವ ಸಂಪುಟ ಪುನರ್ ರಚನೆಯಾಗುವ ಸಾಧ್ಯತೆಗಳಿವೆ ಎಂದು ಬಿಜೆಪಿ ಉನ್ನತ ಮೂಲಗಳು ಹೇಳಿವೆ. ಈ ಸಂಬಂಧ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಜೊತೆಗೆ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಚರ್ಚೆ ನಡೆಸಿದ್ದಾರೆ.
ಮುಂಬರುವ ಉಪ ಚುನಾವಣೆ ತಯಾರಿಗೆ ಸಂಬಂಧಿಸಿದಂತೆ ಉಭಯ ನಾಯಕರ ನಡುವೆ ಚರ್ಚೆ ನಡೆದಿದೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ರಾಜ್ಯದಲ್ಲಿ ಹಿನ್ನಡೆಯಾಗಿದ್ದು, ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಗಳಲ್ಲಿ 13 ರ ಪೈಕಿ 2 ಮಾತ್ರ ಬಿಜೆಪಿ ಗೆದ್ದಿದೆ. ಹೀಗಾಗಿ ಉತ್ತರ ಪ್ರದೇಶದಲ್ಲಿ ನಡೆಯಲಿರುವ ಉಪ ಚುನಾವಣೆ ಮಹತ್ವದಾಗಿದ್ದು, ಗಂಭೀರವಾಗಿ ಪರಿಗಣಿಸಲು ಹೈಕಮಾಂಡ್ ಸೂಚಿಸಿದೆ.
ಮೂಲಗಳ ಪ್ರಕಾರ ಯೋಗಿ ಆದಿತ್ಯನಾಥ್ ಸಂಪುಟದಲ್ಲಿ ದೊಡ್ಡ ಬದಲಾವಣೆಯಾಗುವ ಸಾಧ್ಯತೆ ಇದೆ. ಆದಾಗ್ಯೂ ಸಿಎಂ, ಡಿಸಿಎಂ ಬದಲಾವಣೆ ಬಗ್ಗೆ ಸಭೆಯಲ್ಲಿ ಯಾವುದೇ ಚರ್ಚೆಯನ್ನು ಮಾಡಿಲ್ಲ. ಲೋಕಸಭೆ ಚುನಾವಣಾ ಫಲಿತಾಂಶದ ಆಧಾರದ ಮೇಲೆ ಸಂಪುಟದಲ್ಲಿ ಬದಲಾವಣೆಯಾಗಬಹುದು. ನಡ್ಡಾ ಜೊತೆಗಿನ ಸಭೆಯಲ್ಲಿ ಕೇಶವ್ ಪ್ರಸಾದ್ ಮೌರ್ಯ ಮತ್ತು ಯೋಗಿ ಆದಿತ್ಯನಾಥ್ ನಡುವಿನ ಭಿನ್ನಾಭಿಪ್ರಾಯದ ಬಗ್ಗೆಯೂ ಚರ್ಚೆ ನಡೆದಿದೆ ಎನ್ನಲಾಗಿದೆ.
ಈ ನಡುವೆ ಸಿಎಂ ಯೋಗಿ ಆದಿತ್ಯನಾಥ್ ಅವರು ತಮ್ಮ ಉಸ್ತುವಾರಿ ಸಚಿವರೊಂದಿಗೆ ಸಭೆ ನಡೆಸಿದ್ದಾರೆ. ಪ್ರಾಮಾಣಿಕ ಮತ್ತು ಗೆಲ್ಲಬಹುದಾದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು ಮತ್ತು ಅವರ ಇಮೇಜ್ ಮತ್ತು ಸಾರ್ವಜನಿಕರೊಂದಿಗಿನ ಸಂಪರ್ಕಕ್ಕೆ ಆದ್ಯತೆ ನೀಡಲಾಗುವುದು ಎಂದು ಅವರು ಹೇಳಿದ್ದಾರೆ ಎನ್ನಲಾಗಿದೆ.