ಬೆಂಗಳೂರು: ಕಾಂಗ್ರೆಸ್ ಟಿಕೆಟ್ ಅಂತಿಮಗೊಳಿಸುವ ನಿಟ್ಟಿನಲ್ಲಿ ಶುಕ್ರವಾರ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯಲಿದೆ. ಈ ನಿಟ್ಟಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಪ್ರಚಾರ ಸಮಿತಿ ಅಧ್ಯಕ್ಷ ಎಂಬಿ ಪಾಟೀಲ್ ಸೇರಿದಂತೆ ಕಾಂಗ್ರೆಸ್ ನಾಯಕರು ದೆಹಲಿಗೆ ತೆರಳುತ್ತಿದ್ದಾರೆ. ಈ ನಡುವೆ ಆಂಕಾಂಕ್ಷಿಗಳು ಕೂಡಾ ದೆಹಲಿ ವಿಮಾನ ಏರುತ್ತಿದ್ದಾರೆ.
ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಕೇಂದ್ರ ಚುನಾವಣಾ ಸಮಿತಿ ಸಭೆ ಆರಂಭಗೊಳ್ಳಲಿದೆ. ಸಮಿತಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಪರಿಷತ್ ಪ್ರತಿಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್, ಡಾ ಜಿ ಪರಮೇಶ್ವರ್, ಎಂಬಿ ಪಾಟೀಲ್, ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ ವೇಣುಗೋಪಾಲ್, ರಣಪದೀಪ್ ಸಿಂಗ್ ಸುರ್ಜೇವಾಲ ಹಾಗೂ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಇದ್ದಾರೆ.
ಈ ಸಭೆ ಟಿಕೆಟ್ ಅಂತಿಮಗೊಳಿಸುವ ನಿಟ್ಟಿನಲ್ಲಿ ಮಹತ್ವ ಪಡೆದುಕೊಂಡಿದೆ. ಸ್ಕ್ರೀನಿಂಗ್ ಕಮಿಟಿಯಲ್ಲಿ ಈಗಾಗಲೇ ಯಾವ ಯಾವ ಕ್ಷೇತ್ರಗಳಿಗೆ ಯಾರಿಗೆ ಟಿಕೆಟ್ ಕೊಡಬಹುದು ಎಂಬುದನ್ನು ಶಿಫಾರಸು ಮಾಡಲಾಗಿದೆ. ಅದರಂತೆ ಕೇಂದ್ರ ಚುನಾವಣಾ ಸಮಿತಿಯಲ್ಲಿ ಮತ್ತೊಂದು ಸುತ್ತಿನ ಚರ್ಚೆ ನಡೆಯಲಿದೆ. ಅಂತಿಮವಾಗಿ ಈ ಸಭೆಯಾದ ಬಳಿಕ ಮಾರ್ಚ್ 20 ರಂದು ಮೊದಲ ಪಟ್ಟಿ ಘೋಷಣೆ ಆಗುವ ಸಾಧ್ಯತೆ ಇದೆ.
ದೆಹಲಿಯಲ್ಲಿ ಬೀಡು ಬಿಟ್ಟಿರುವ ಆಕಾಂಕ್ಷಿಗಳು
ಟಿಕೆಟ್ ಫೈನಲ್ ಹಿನ್ನೆಲೆಯಲ್ಲಿ ಹಲವು ಆಕಾಂಕ್ಷಿಗಳು ದೆಹಲಿಯಲ್ಲೇ ಬೀಡು ಬಿಟ್ಟಿದ್ದಾರೆ. ಕೆಲವರು ಈಗಾಗಲೇ ದೆಹಲಿಗೆ ತೆರಳಿದರೆ ಮತ್ತೆ ಕೆಲವರು ಶುಕ್ರವಾರ ವಿಮಾನ ಏರುತ್ತಿದ್ದಾರೆ. ಕೊನೆಯ ಹಂತದಲ್ಲಿ ರಾಜ್ಯ ನಾಯಕರನ್ನು ಭೇಟಿ ಮಾಡಿ ಲಾಬಿ ನಡೆಸುತ್ತಿದ್ದಾರೆ. ಮತ್ತೊಂದು ಕಡೆಯಲ್ಲಿ ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಟಿಕೆಟ್ಗಾಗಿ ಲಾಬಿ ನಡೆಸುತ್ತಿದ್ದಾರೆ.
ಕಾಂಗ್ರೆಸ್ ಟಿಕೆಟ್ಗಾಗಿ 1200 ಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಈ ಪೈಕಿ ಹಾಲಿ ಶಾಸಕರಿಗೆ ಟಿಕೆಟ್ ಕೊಡುವುದು ಅನಿವಾರ್ಯವಾಗಿದೆ. ಅದರಲ್ಲೂ ಕೆಲವು ಕ್ಷೇತ್ರಗಳಲ್ಲಿ ಸಮೀಕ್ಷೆ ಆಧಾರಿಸಿ ಟಿಕೆಟ್ ನಿರಾಕರಣೆ ಮಾಡುವ ಸಾಧ್ಯತೆಗಳನ್ನು ಅಲ್ಲಗಳೆಯುವ ಹಾಗಿಲ್ಲ. 120 ಕ್ಷೇತ್ರಗಳಲ್ಲಿ ದೊಡ್ಡ ಸಮಸ್ಯೆ ಆಗದಿದ್ದರೂ ಸುಮಾರು 80 ಕ್ಷೇತ್ರಗಳಲ್ಲಿ ಸಾಕಷ್ಟು ಆಕಾಂಕ್ಷಿಗಳು ಇರುವ ಹಿನ್ನೆಲೆಯಲ್ಲಿ ರಾಜ್ಯ ನಾಯಕರಿಗೆ ತಲೆನೋವಾಗಿದೆ. ಯಾವುದೇ ಬಂಡಾಯಕ್ಕೆ ಅವಕಾಶ ಕೊಡದಂತೆ ಎಚ್ಚರಿಕೆಯ ಕ್ರಮವನ್ನು ವಹಿಸಲಾಗುತ್ತಿದೆ. ಈ ಎಲ್ಲಾ ನಿಟ್ಟಿನಲ್ಲಿ ಎಲ್ಲರ ಚಿತ್ತ ದಿಲ್ಲಿಯತ್ತ ನೆಟ್ಟಿದೆ.