ದುಬೈ ರಾಜಕುಮಾರಿ ಶೈಖಾ ಮಹ್ರಾ ಮೊಹಮ್ಮದ್ ರಶೆದ್ ಅಲ್ ಮಕ್ತೂಮ್ ಅವರು ತಮ್ಮ ಪತಿ ಶೇಖ್ ಮನ ಬಿನ್ ಮೊಹಮ್ಮದ್ ಬಿನ್ ರಶೀದ್ ಬಿನ್ ಮನಾ ಅಲ್ ಮಕ್ತೌಮ್ಗೆ ಇನ್ಸ್ಟಾಗ್ರಾಂನಲ್ಲಿ ತ್ರಿವಳಿ ತಲಾಖ್ ನೀಡುವ ಮೂಲಕ ವಿಚ್ಚೇದನ ಘೋಷಿಸಿದ್ದಾರೆ.
ದಂಪತಿಗೆ ಮೊದಲ ಮಗು ಹುಟ್ಟಿದ ಎರಡು ತಿಂಗಳಲ್ಲೇ ಇಬ್ಬರು ಬೇರೆಯಾಗಿದ್ದಾರೆ. ಪತಿ ಶೇಖ್ ಮನ ಬೇರೆಯವರ ಜೊತೆ ಸಂಬಂಧ ಹೊಂದಿರುವುದರಿಂದ ಶೈಖಾ ಆತನಿಂದ ದೂರವಾಗಿದ್ದಾರೆ.
ಜುಲೈ 16ರಂದೇ ಇನ್ಸ್ಟಾಗ್ರಾಂನಲ್ಲಿ ರಾಜಕುಮಾರಿ ಶೈಖಾ ಮಹ್ರಾ ಮೊಹಮ್ಮದ್ ಪತಿ ಮೇಲೆ ದ್ರೋಹದ ಆರೋಪ ಮಾಡಿ ವಿಚ್ಛೇದನ ನೀಡುವುದಾಗಿ ಘೋಷಿಸಿದ್ದಾರೆ.
“ಆತ್ಮೀಯ ಗಂಡ, ನೀವು ಇತರ ಸಹಪಾಠಿಗಳ ಜೊತೆ ನಿರತರಾಗಿದ್ದೀರ, ನಾನು ಈ ಮೂಲಕ ನಮ್ಮ ವಿಚ್ಛೇದನವನ್ನು ಘೋಷಿಸುತ್ತೇನೆ. ತಲಾಖ್, ತಲಾಖ್, ತಲಾಖ್, ಕಾಳಜಿ ವಹಿಸಿ, ನಿಮ್ಮ ಮಾಜಿ ಪತ್ನಿ” ಎಂದು ಪೋಸ್ಟ್ ಮಾಡಿದ್ದಾರೆ.
ಇಸ್ಲಾಮಿಕ್ ಕಾನೂನಿನಲ್ಲಿ, ತ್ವರಿತ ವಿಚ್ಛೇದನ ಪಡೆಯುವುದನ್ನು “ತಲಾಕ್-ಎ-ಬಿದ್ದತ್” ಎಂದು ಕರೆಯಲಾಗುತ್ತದೆ, ಅಲ್ಲಿ ಪತಿ ತಕ್ಷಣವೇ ಮದುವೆಯನ್ನು ವಿಸರ್ಜಿಸಲು “ತಲಾಕ್” ಅನ್ನು ಒಮ್ಮೆಲೆ ಮೂರು ಬಾರಿ ಹೇಳಬೇಕಾಗುತ್ತದೆ.
ಸಾಂಪ್ರದಾಯಿಕವಾಗಿ, ಇಸ್ಲಾಮಿಕ್ ಕಾನೂನಿನ ಅನೇಕ ವ್ಯಾಖ್ಯಾನಗಳಲ್ಲಿ ಗಂಡಸರು ಮಾತ್ರ ತಲಾಖ್ ಅನ್ನು ನೀಡಬಹುದಾಗಿದೆ. ಮತ್ತೊಂದೆಡೆ, ಮಹಿಳೆಯರು “ಖುಲಾ” ಎಂದು ಕರೆಯಲ್ಪಡುವ ವಿಭಿನ್ನ ಪ್ರಕ್ರಿಯೆಯ ಮೂಲಕ ವಿಚ್ಛೇದನವನ್ನು ಪಡೆಯುವ ಆಯ್ಕೆಯನ್ನು ಹೊಂದಿದ್ದಾರೆ, ಅಲ್ಲಿ ಅವರು ತಮ್ಮ ಪತಿ ಅಥವಾ ನ್ಯಾಯಾಲಯದಿಂದ ವಿಚ್ಛೇದನವನ್ನು ಕೋರುತ್ತಾರೆ. ಕೆಲವು ನ್ಯಾಯವ್ಯಾಪ್ತಿಗಳಲ್ಲಿ, ಮಹಿಳೆಯರು ತಮ್ಮ ವಿವಾಹ ಒಪ್ಪಂದದಲ್ಲಿ (ನಿಕಾಹ್ನಾಮಾ) ತಲಾಖ್ ಅನ್ನು ಉಚ್ಚರಿಸುವ ಹಕ್ಕನ್ನು ನೀಡುವ ಷರತ್ತನ್ನು ಸಹ ಸೇರಿಸಬಹುದು.
ರಾಜಕುಮಾರಿಯ ಪೋಸ್ಟ್ಗೆ ಸಾಕಷ್ಟು ಜನ ಕಾಮೆಂಟ್ ಮಾಡಿ ಬೆಂಬಲ ಸೂಚಿಸಿದ್ದಾರೆ. ಹಲವು ಹಿತೈಷಿಗಳು ಕೂಡ ರಾಜಕುಮಾರಿಯನ್ನು ಬೆಂಬಲಿಸಿ ಕಾಮೆಂಟ್ ಮಾಡಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಗಂಡ-ಹೆಂಡತಿ ಇಬ್ಬರೂ ಪರಸ್ಪರರನ್ನು ಅನ್ಫಾಲೋ ಮಾಡಿದ್ದು, ಒಟ್ಟಿಗೆ ಇದ್ದ ಫೋಟೊಗಳನ್ನು ಡಿಲೀಟ್ ಮಾಡಿದ್ದಾರೆ.
ಶೈಖಾ ಮಹ್ರಾ ಅವರು ಕೈಗಾರಿಕೋದ್ಯಮಿ ಶೇಖ್ ಮನ ಬಿನ್ ಮೊಹಮ್ಮದ್ ಬಿನ್ ರಶೀದ್ ಬಿನ್ ಮನ ಅಲ್ ಮಕ್ತೌಮ್ ಅವರನ್ನು ಮೇ 2023 ರಲ್ಲಿ ವಿವಾಹವಾದರು. ಒಂದು ವರ್ಷದ ನಂತರ ದಂಪತಿಗೆ ಹೆಣ್ಣು ಮಗು ಜನಿಸಿದೆ. ಮಗು ಜನಿಸಿದ ಎರಡೇ ತಿಂಗಳಿಗೆ ಇಬ್ಬರು ದೂರ ದೂರವಾಗಿದ್ದಾರೆ.
ಜೂನ್ನಲ್ಲಿಯೇ ಶೈಖಾ ಮಹ್ರಾ ತಮ್ಮ ಮಗುವ ಅಪ್ಪಿಕೊಂಡಿರುವ ಚಿತ್ರವನ್ನು ಹಂಚಿಕೊಂಡು, ನಾವಿಬ್ಬರು ಮಾತ್ರ ಎಂದು ಪೋಸ್ಟ್ ಹಾಕಿದ್ದರು. ಆಗಲೇ ಶೈಖಾ ಮಹ್ರಾ ಗಂಡನಿಂದ ದೂರ ಉಳಿಯುವ ಬಗ್ಗೆ ಸುಳಿವು ನೀಡಿದ್ದರು
ಶೈಖಾ ಮಹ್ರಾ ಮೊಹಮ್ಮದ್ ರಶೆದ್ ಅಲ್ ಮಕ್ತೂಮ್ ಅವರು ಪ್ರಸ್ತುತ ದುಬೈನ ಆಡಳಿತಗಾರರು, ಉಪಾಧ್ಯಕ್ಷರು ಮತ್ತು ಪ್ರಧಾನ ಮಂತ್ರಿಯಾಗಿಯೂ ಸೇವೆ ಸಲ್ಲಿಸುತ್ತಿರುವ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರ ಮಗಳು.