ಸದ್ಯಕ್ಕೆ ವಾಲ್ಮೀಕಿ ನಿಗಮದ ಹಗರಣದ ಚರ್ಚೆ ಅಧಿವೇಶನದಲ್ಲಿ ಆಗುತ್ತಿದೆ. ಶುಕ್ರವಾರ ಅಥವಾ ಸೋಮವಾರ ಮುಡಾ ಹಗರಣದ ಬಗ್ಗೆ ಮಾತನಾಡುತ್ತೇವೆ. ಎಂಡಿಎ ಹಗರಣ ತಾರ್ಕಿಕ ಅಂತ್ಯ ಕಾಣಲಿದೆ. ಈಗ ನಿವೃತ್ತ ನ್ಯಾಯಾಧೀಶಕರ ನೇತೃತ್ವದಲ್ಲಿ ಸಮಿತಿ ರಚಿಸಿ, ವರದಿ ನೀಡಲು ಆರು ತಿಂಗಳ ಕಾಲಾವಕಾಶ ನೀಡಲಾಗಿದೆ ಎಂದು ಕೆ.ಆರ್.
ಕ್ಷೇತ್ರದ ಶಾಸಕ ಟಿ.ಎಸ್. ಶ್ರೀವತ್ಸ ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಐಎಎಸ್ ಅಧಿಕಾರಿಗಳ ತಂಡ ರಚಿಸಿ ಒಂದು ತಿಂಗಳ ಒಳಗೆ ವರದಿ ನೀಡಲು ಸೂಚಿಸಲಾಗಿತ್ತು. ಇದನ್ನೆಲ್ಲಾ ಗಮನಿಸಿದರೆ ಈ ಪ್ರಕರಣವನ್ನು ಮುಂದೂಡುವ ತಂತ್ರ ಅಡಗಿದೆ. ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರು ಮೊದಲು ಹಗರಣ ನಡೆದಿಲ್ಲ ಎಂದಿದ್ದರು.ಅದಾದ ಬಳಿಕ ಎಂಡಿಎಗೆ ಭೇಟಿ ನೀಡಿ ಸಭೆ ನಡೆಸಿದರು. ಸಭೆ ನಡೆಸಿ ಮಹತ್ವದ ದಾಖಲೆಗಳನ್ನು ಬೆಂಗಳೂರಿಗೆ ಕೊಂಡೊಯ್ದರು.
ಅವರು ಏನೆಲ್ಲಾ ದಾಖಲೆ ಕೊಂಡೊಯ್ದಿದ್ದರೂ ನಮ್ಮ ಬಳಿ ಸೂಕ್ತ ದಾಖಲೆಗಳಿವೆ. ಅಧಿವೇಶನದಲ್ಲಿ ಆ ಎಲ್ಲಾ ದಾಖಲೆಗಳನ್ನು ಬಹಿರಂಗಪಡಿಸುತ್ತೇವೆ ಎಂದು ಅವರು ತಿಳಿಸಿದರು