ಬಾಲಿವುಡ್ ನಟಿ ಜಾನ್ವಿ ಕಪೂರ್ ಸದಾ ಸಿನಿಮಾ ಹಾಗೂ ಫೋಟೋಗಳ ಮೂಲಕವೇ ಸುದ್ದಿಯಾಗ್ತಿರ್ತಾರೆ. ಆದ್ರೆ ಇದೀಗ ಈ ಬ್ಯೂಟಿಫುಲ್ ನಟಿ ತಮ್ಮ ಆರೋಗ್ಯದ ಕಾರಣಕ್ಕೆ ಸುದ್ದಿಯಾಗಿದ್ದಾರೆ. ಹೌದು. ಜಾನ್ವಿ ಕಪೂರ್ ಆರೋಗ್ಯದಲ್ಲಿ ಏರುಪೇರು ಆಗಿದ್ದು, ಸದ್ಯ ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ನಟಿಗೆ ಫುಡ್ ಪಾಯ್ಸನ್ ಆಗಿದೆ ಎಂದು ಹೇಳಲಾಗುತ್ತಿದೆ. ಮೊದಲ ಹಂತದ ಚಿಕಿತ್ಸೆ ನೀಡಿರುವ ವೈದ್ಯರು ಮೂರು ದಿನಗಳ ಕಾಲ ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ. ಇನ್ನೆರಡು ದಿನದಲ್ಲಿ ಅವರು ಡಿಸ್ಜಾರ್ಜ್ ಆಗಲಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿದೆ.
ಇತ್ತೀಚೆಗೆ ನಡೆದ ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಮದುವೆಯಲ್ಲಿ ಜಾನ್ವಿ ಕಪೂರ್ ಅವರು ಭಾಗಿ ಆಗಿದ್ದಾರೆ. ಮಿರಿಮಿರಿ ಮಿಂಚುವ ಬಟ್ಟೆ ಧರಿಸಿ ಅವರು ಎಂಜಾಯ್ ಮಾಡಿದ್ದರು. ಆ ಮದುವೆ ಮುಗಿಸಿಕೊಂಡ ಬಳಿಕ ಅವರು ಚೆನ್ನೈಗೆ ತೆರಳಿದರು. ಅಲ್ಲಿ ಅವರ ಕುಟುಂಬಸ್ಥರ ಮನೆಗೆ ಹೋಗಿ ಸೀ ಫುಡ್ ಸೇವಿಸಿದ್ದಾರೆ ಎನ್ನಲಾಗಿದೆ. ಅದರಿಂದಲೇ ಜಾನ್ವಿ ಕಪೂರ್ ಅವರಿಗೆ ಫುಡ್ ಪಾಯ್ಸನ್ ಆಗಿದೆ.
ಚೆನ್ನೈನಲ್ಲಿ ಸೇವಿಸಿದ ಆಹಾರದಿಂದ ಜಾನ್ವಿ ಕಪೂರ್ ಅವರಿಗೆ ತೊಂದರೆ ಆಗಿದೆ. ಚೆನ್ನೈ ನಿವಾಸದಲ್ಲಿ ಇರುವಾಗಲೇ ಅವರು ಅನಾರೋಗ್ಯದಿಂದ ಕುಸಿದು ಬಿದ್ದರು ಎನ್ನಲಾಗಿದೆ. ಆ ಬಳಿಕ ತಂದೆ ಬೋನಿ ಕಪೂರ್ ಅವರು ಜಾನ್ವಿಯನ್ನು ಮುಂಬೈಗೆ ಕರೆದುಕೊಂಡು ಬಂದು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದರು. ಸದ್ಯಕ್ಕೆ ಅಭಿಮಾನಿಗಳು ಆತಂಕಪಡುವ ಅಗತ್ಯವೇನಿಲ್ಲ ಎಂದು ಹೇಳಲಾಗುತ್ತಿದೆ.
ಜಾನ್ವಿ ಕಪೂರ್ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.ಬ್ಯಾಕ್ ಟು ಬ್ಯಾಕ್ ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿ ಕಾಣಿಸಿಕೊಳ್ತಿದ್ದಾರೆ. ದಕ್ಷಿಣ ಭಾರತದಲ್ಲೂ ಅವರಿಗೆ ಚಾನ್ಸ್ ಸಿಗುತ್ತಿದೆ. ಜೂನಿಯರ್ ಎನ್ಟಿಆರ್ ನಟನೆಯ ‘ದೇವರ’ ಸಿನಿಮಾಗೆ ಜಾನ್ವಿ ಕಪೂರ್ ನಾಯಕಿ ಆಗಿದ್ದು, ಆ ಮೂಲಕ ಅವರು ಟಾಲಿವುಡ್ಗೆ ಎಂಟ್ರಿ ನೀಡಿದ್ದಾರೆ. ಇದರ ಜೋತೆಗೆ ನ್ಯಾಚುರಲ್ ಸ್ಟಾರ್ ನಾನಿಗೂ ಈಕೆ ನಾಯಕಿಯಾಗಿದ್ದಾರೆ.