ಮಂಡ್ಯ :- ಕಾವೇರಿ ನದಿಯ ಹುಲಿ ಎಂದೇ ಖ್ಯಾತಿಗಳಿಸಿರುವ ಮಹಶೀರ್ ಮೀನು ಇತ್ತಿಚಿನ ದಿನಗಳಲ್ಲಿ ಅಳಿವಿನಂಚಿನಲ್ಲಿದೆ ಹೀಗಾಗಿ ಅದನ್ನು ಸಂರಕ್ಷಣೆ ಮಾಡುವ ಉದ್ದೇಶದಿಂದ ವಿಶೇಷ ಕಾಳಜಿ ವಹಿಸಲಾಗುತ್ತಿದೆ ಎಂದು ಮುಖ್ಯ ವನ್ಯಜೀವಿ ಪರಿಪಾಲಕರಾದ ರಾಜೀವ್ ರಂಜನ್ ಹೇಳಿದರು.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಮುತ್ತತ್ತಿ ಅರಣ್ಯ ಪ್ರದೇಶದ ಭೀಮೇಶ್ವರಿ ಫಿಶಿಂಗ್ ಕ್ಯಾಂಪ್ ನಲ್ಲಿ ಸೋಮವಾರ ರಾಜ್ಯ ಮಟ್ಟದ ಒಂದು ದಿನದ ಮೀನುಗಳ ಸಂರಕ್ಷಣಾ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಅಳಿವಿನ ಅಂಚಿನಲ್ಲಿರುವ ಮಹಶೀರ್ ಮೀನಿನ ರಕ್ಷಣೆಗೆ ಸರ್ಕಾರ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಈ ಮೀನು ಸುಮಾರು 5 ಅಡಿಗೂ ಹೆಚ್ಚು ಉದ್ದ ಹಾಗೂ 50 ಕೆಜಿಗೂ ಹೆಚ್ಚು ತೂಕದಷ್ಟು ದೈತ್ಯಾಕಾರವಾಗಿ ಬೆಳೆಯುತ್ತದೆ. ಆದರೆ ವಿಪರ್ಯಾಸದ ಸಂಗತಿಯೆಂದರೆ ಇಂತಹ ಅದ್ಭುತವಾದ ಜಗತ್ಪ್ರಸಿದ್ಧ ಜೀವಿಯೊಂದು ವೈಜ್ಞಾನಿಕ ಹೆಸರನ್ನು ಪಡೆಯುವ ಮೊದಲೇ ಅಳಿವಿನಂಚಿಗೆ ಬಂದು ನಿಂತಿರುವುದು, ನಿಜವಾಗಿಯೂ ನಂಬಲಾಗದ ಸಂಗತಿಯಾಗಿದೆ ಎಂದರು.
ಕಾವೇರಿ ವನ್ಯಜೀವಿಯ ಡಿಸಿಎಫ್ ನಂದೀಶ್ ಮಾತನಾಡಿ, ಕಾವೇರಿ ನದಿಯ ವಿವಿಧ ಭಾಗಗಳಲ್ಲಿ ಸಿಡಿಮದ್ದುಗಳನ್ನು ಬಳಸಿಕೊಂಡು ಅತಿಯಾದ ಮೀನುಗಾರಿಕೆಯ ಕಾರಣದಿಂದ ಸಾಮೂಹಿಕವಾಗಿ ಮೀನುಗಳು ನಾಶವಾಗುತ್ತಿವೆ. ಈ ಮಹಶೀರ್ ತಳಿಯ ಮೀನಿನ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆಯಾಗಿರುವುದು ಕಂಡು ಬಂದಿದ್ದು, ಈ ಮೀನನ್ನು ಅಳಿವಿನಂಚಿಗೆ ನೂಕಿದೆ.
ಹೀಗಾಗಿ ಈ ಮೀನಿನ ಸಂರಕ್ಷಣೆ ಹಾಗೂ ಹೆಚ್ಚಿನ ಉತ್ಪಾದನೆ ಮಾಡುವ ದೃಷ್ಟಿಯಿಂದ ಮೀನುಗಾರಿಕೆ ಇಲಾಖೆಯ ಸಹಯೋಗದೊಂದಿಗೆ
ಕುಶಾಲನಗರದ ಹಾರಂಗಿ ಬಳಿ ಮಹಶೀರ್ ಮೀನುಮರಿಗಳ ಉತ್ಪಾದನೆಗೆ ಕೇಂದ್ರವನ್ನು ತೆರೆಯಲಾಗಿದ್ದು, ಅಲ್ಲಿ ಫೀಸ್ ಡೆವೆಲಪ್ ಮಾಡಿದ ಬಳಿಕ ಕಾವೇರಿ ನದಿಗೆ ಮತ್ತೆ ಮಹಶೀರ್ ಮೀನು ಬಿಟ್ಟು ಸಂತತಿ ಉಳಿಸುವ ಚಿಂತನೆಯಾಗಿದೆ ಎಂದು ತಿಳಿಸಿದರು.
ಕಾರ್ಯಾಗಾರದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ನೂರಾರು ವಿದ್ಯಾರ್ಥಿಗಳು ಭಾಗವಹಿಸಿ ಮಾಹಿತಿ ಪಡೆದುಕೊಂಡರು.ಕಾರ್ಯಾಗಾರದಲ್ಲಿ ಅಪರ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ಕುಮಾರ್ ಪುಷ್ಕಲ್, ಚಾಮರಾಜನಗರ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಾಲತಿ ಪ್ರಿಯಾ, ಬಿಳಿಗಿರಿರಂಗನಬೆಟ್ಟ ಡಿಸಿಎಫ್ ಸಂತೋಷ್ ಕುಮಾರ್, ಬನ್ನೇರುಘಟ್ಟ ಡಿಸಿಎಫ್ ಪ್ರಭಾಕರ್ ಪ್ರಿಯಾ ದರ್ಶಿನಿ, ಸಂಶೋಧಕ ಡಾ.ಬಷೀರ್, ವಾಸಿ ಫೌಂಡೇಶನ್ ನಂದೀಶ್ ಶ್ರೀನಿವಾಸನ್, ಕನಕಪುರ ಉಪ ವಿಭಾಗದ ಎಸಿಎಫ್ ನಾಗೇಂದ್ರ ಪ್ರಸಾದ್, ಹಲಗೂರು ವಲಯ ಅರಣ್ಯಾಧಿಕಾರಿ ರವಿಬುರ್ಜಿ ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್ ಮಂಡ್ಯ