ಸೆಲೆಬ್ರಿಟಿಗಳನ್ನು ನೋಡಿದಾಗ ಅವರೊಂದಿಗೆ ಫೋಟೋ ತೆಗೆಸಿಕೊಳ್ಳಬೇಕು ಅನ್ನೋ ಆಸೆ ಸಾಕಷ್ಟು ಮಂದಿಗೆ ಇದ್ದೇ ಇರುತ್ತೆ. ಅದರಲ್ಲೂ ನೆಚ್ಚಿನ ನಟನೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳು ಗಂಟೆ ಗಟ್ಟಲೆ ಕಾದು ಕೂತಿರ್ತಾರೆ. ಆದರೆ ಆ ಆಸೆ ಎಲ್ಲರಿಗೂ ನೆರವೇರೋದಿಲ್ಲ. ಅಂತೆಯೇ ಇಲ್ಲೊಬ್ಬ ಅಭಿಮಾನಿ ಸುದೀಪ್ ಜೊತೆ ಫೋಟೋ ತೆಗೆಸಿಕೊಳ್ಳಲು ಎರಡು ಗಂಟೆ ಕಾದಿದ್ದಾನೆ. ಆದರೆ ಫೋಟೋಗೆ ಫೋಸ್ ಕೊಡಲು ನಿರಾಕರಿಸಿದ್ದಾರೆ. ಇದರಿಂದ ಅಸಮಾಧಾನಗೊಂಡ ಅಭಿಮಾನಿ ವಿಡಿಯೋ ಮೂಲಕ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.
ಬೆಂಗಳೂರು ಏರ್ಪೋರ್ಟ್ನಲ್ಲಿ ಕಿಚ್ಚ ಸುದೀಪ್ ಅವರ ಕಾರು ಇರುವುದನ್ನು ಅಭಿಮಾನಿಯೊಬ್ಬರು ಗಮನಿಸಿದ್ದರು. ಹೀಗಾಗಿ ನೆಚ್ಚಿನ ನಟನೊಂದಿಗೆ ಒಂದು ಫೋಟೋ ತೆಗೆದುಕೊಳ್ಳಬೇಕೆಂದು ಸುಮಾರು ಎರಡು ಗಂಟೆಗಳಿಂದ ಕಾದು ಕುಳಿತ್ತಿದ್ದರು. ಏರ್ಪೋರ್ಟ್ ಹೊರಗೆ ಸುದೀಪ್ ಬರುವುದು ಕಂಡು ಅಭಿಮಾನಿ ಸೆಲ್ಫಿ ಕೇಳಿದ್ದಾರೆ. ಆದರೆ ಸುದೀಪ್ ಫೋಟೋಗೆ ನಿರಾಕರಿಸಿದ್ದಾರೆ. ಮಾತ್ರವಲ್ಲ ಕಾರಿನ ಬಳಿ ಹೋಗಿ ಫೋಟೊ ತೆಗೆಯಲು ಹೋದಾಗ, ಫೋಟೊ ತೆಗೆಯಬೇಡ ಎಂಬಂತೆ ಸನ್ನೆ ಮಾಡಿದ್ದಾರೆ. ತಮ್ಮ ಬಾಡಿಗಾರ್ಡ್ಗೆ ಹೇಳಿ ಫೋಟೊ ತೆಗೆಯಲು ಬಿಡಬೇಡಿ ಎಂಬಂತೆ ಸೂಚಿಸಿದ್ದಾರೆ. ಸೆಲ್ಫಿಗಾಗಿ 2 ಗಂಟೆ ಕಾದಿದ್ದಕ್ಕೆ ಕಿಚ್ಚ ಸುದೀಪ್ ಅವಮಾನ ಮಾಡಿದ್ದಾರೆ. ಸೆಲೆಬ್ರಿಟಿಗಳಿಗೆ ಧಿಕ್ಕಾರ ಎಂದು ಯುವಕ ವಿಡಿಯೊ ಪೋಸ್ಟ್ ಮಾಡಿದ್ದಾರೆ.
ಎಲ್ಲ ಸೆಲೆಬ್ರಿಟಿಗಳು ಇದೇ ರೀತಿನೇ ತಮ್ಮ ಫ್ಯಾನ್ಸ್ಗಳನ್ನ ಟ್ರೀಟ್ ಮಾಡುವುದು. ನಾವು ಗಂಟಗಟ್ಟಲೆ ಕ್ಯೂ ನಿಂತು ನೂರಾರು ರೂ. ಖರ್ಚು ಮಾಡಿ ಮೂರು ಗಂಟೆ ಸಿನಿಮಾ ನೋಡಿ ಬರ್ತಿವಿ. ಆದರೆ 5 ಸೆಕೆಂಡ್ ನಿಂತು ಅಭಿಮಾನಿಗಳಿಗೆ ಫೋಟೊ ಕೊಡಲು ಆಗುವುದಿಲ್ಲ ಎಂದರೆ ಇವರೆಲ್ಲ ಯಾವ ಸೀಮೆಯ ಸೆಲೆಬ್ರಿಟಿಗಳು ಎಂದು ಯುವಕ ಬೇಸರವನ್ನು ವ್ಯಕ್ತಪಡಿಸಿದ್ದಾರೆ.
ಕೆಲಸ ಮಾಡಿಕೊಂಡು ಮನೆಯವರನ್ನೆಲ್ಲ ಚೆನ್ನಾಗಿ ನೋಡಿಕೊಳ್ಳಬೇಕು ಅನ್ನೋ ಮೈಂಡ್ಸೆಟ್ನ ಇಟ್ಕೊಳ್ಳಿ.. ನಿಮ್ಗೆ ಏನಾದರೂ ಬೇಜಾರು ಆದರೆ ಟೈಂ ಪಾಸ್ಗಷ್ಟೇ ಸಿನಿಮಾ ನೋಡಿ. ಅದು ಬಿಟ್ಟು ಹೀರೋಗಳಿಗಾಗಿ ನಿಮ್ಮ ಮೈಮೇಲೆ ಅವರ ಹೆಸರಿನ ಟ್ಯಾಟು ಎಲ್ಲ ಹಾಕಿಸಿಕೊಳ್ಳಬೇಡಿ ಎಂದು ಮನವಿ ಮಾಡಿದ್ದಾರೆ.