ಬೆಂಗಳೂರು: ಕರ್ನಾಟಕದಲ್ಲಿ ಮುಂಗಾರುಮಳೆ ಆರ್ಭಟ ಮುಂದುವರೆದಿದೆ. ಜುಲೈ 24ರವರೆಗೂ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಲವೆಡೆ ಗುಡ್ಡ ಕುಸಿದಿದೆ, ನದಿಗಳಲ್ಲಿ ನೀರು ತುಂಬಿವೆ, ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಕೆಲವು ರಸ್ತೆಗಳಲ್ಲಿ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ.
ಅಂಕೋಲಾದಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿತದ ಕಾರಣ ಸಂಚಾರ ಸಂಪೂರ್ಣ ಸ್ಥಗಿತವಾಗಿದ್ದು, ಇದೇ ರೀತಿಯ ಪರಿಸ್ಥಿತಿ ರಾಜ್ಯದ ಇನ್ನೂ ಹಲವು ರಸ್ತೆಗಳಲ್ಲಿದೆ.
ಬೆಂಗಳೂರು ಮಂಗಳೂರು ಸಂಪರ್ಕ ಭಾಗಶಃ ಕಡಿತ
ಬೆಂಗಳೂರು-ಮಂಗಳೂರು ನಡುವಣ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕೂಡ ಸಂಚಾರಕ್ಕೆ ಸಮಸ್ಯೆಯಾಗಿದೆ. ಶಿರಾಡಿ ಘಾಟಿ ದೊಡ್ಡತಪ್ಲು ಎಂಬಲ್ಲಿ ಭಾರಿ ಪ್ರಮಾಣದಲ್ಲಿ ಭೂಕುಸಿತ ಸಂಭವಿಸಿದ್ದು, ಹೆದ್ದಾರಿ ಸಂಚಾರ ಸ್ಥಗಿತಗೊಂಡಿದೆ. ಅತ್ತ ಸಂಪಾಜೆ ಘಾಟಿಯಲ್ಲಿ ಭೂಕುಸಿತದ ಆತಂಕ ಇರುವ ಕಾರಣ ರಾತ್ರಿ 8ರಿಂದ ಬೆಳಗ್ಗೆ 6ರ ವರೆಗೆ 3 ದಿನಗಳ ಕಾಲ ಸಂಚಾರ ನಿಷೇಧಿಸಿ ಮಡಿಕೇರಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಶೃಂಗೇರಿ ಹೊರನಾಡು ರಸ್ತೆ ಬಂದ್
ಶೃಂಗೇರಿ ಮತ್ತು ಹೊರನಾಡು ಮಧ್ಯೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿಯೂ ಸಂಚಾರ ಸ್ಥಗಿತಗೊಂಡಿವೆ. ಕಳಸ ಪಟ್ಟಣ ಸಂಪರ್ಕಿಸುವ ರಸ್ತೆ, ಕೊಪ್ಪ ತಾಲೂಕಿನ ಬಿಳಾಲುಕೊಪ್ಪದಿಂದ ಬಸರೀಕಟ್ಟೆಗೆ ಹೋಗುವ ರಸ್ತೆ ಜಲಾವೃತಗೊಂಡಿದ್ದು, ಶೃಂಗೇರಿಯಿಂದ ಹೊರನಾಡಿಗೆ ಹೋಗುವ ಮುಖ್ಯ ರಸ್ತೆಯೇ ಬಂದ್ ಆಗಿದೆ.
ಮಡಿಕೇರಿ-ವಿರಾಜಪೇಟೆ ರಾಜ್ಯ ಹೆದ್ದಾರಿ ಬಂದ್ ಆತಂಕ
ಕೊಡಗಿನಲ್ಲಿ ರಣಭೀಕರ ಮಳೆಯಾಗುತ್ತಿದ್ದು, ಮಡಿಕೇರಿ ತಾಲೂಕಿನ ಮಡಿಕೇರಿ-ವಿರಾಜಪೇಟೆ ರಾಜ್ಯ ಹೆದ್ದಾರಿಯಲ್ಲಿ ಪ್ರವಾಹ ಉಂಟಾಗಿದೆ. ಸದ್ಯ ಯಾವುದೇ ಕ್ಷಣ ವಿರಾಜಪೇಟೆ ಸಂಪರ್ಕ ಕಡಿತವಾಗುವ ಸಾಧ್ಯತೆಯಿದೆ.
ಶಿರಸಿ – ಕುಮಟಾ ರಾಷ್ಟ್ರೀಯ ಹೆದ್ದಾರಿ ಬಂದ್
ರಾಗಿಹೊಸಳ್ಳಿ ಬಳಿ ಭಾರಿ ಪ್ರಮಾಣದ ಭೂಕುಸಿತ ಸಂಭವಿಸಿದ ಕಾರಣ ಶಿರಸಿ – ಕುಮಟಾ ರಾಷ್ಟ್ರೀಯ ಹೆದ್ದಾರಿಯಲ್ಲಿಯೂ ಸಂಚಾರ ಬಂದ್ ಆಗಿದೆ. ಪರಿಣಾಮವಾಗಿ ಕರಾವಳಿ ಮತ್ತು ಮಲೆನಾಡಿನ ಸಂಪರ್ಕ ಕಷ್ಟವಾಗಿದೆ. ಸದ್ಯ ಕರಾವಳಿ ಭಾಗಕ್ಕೆ ತೆರಳಲು ಮತ್ತು ಅಲ್ಲಿಂದ ಮಲೆನಾಡು ಪ್ರದೇಶಕ್ಕೆ ಪ್ರಯಾಣಿಸಲು ಯಲ್ಲಾಪುರ – ಅಂಕೋಲಾ ರಸ್ತೆ ಅಥವಾ ಶಿರಸಿ – ಯಾಣ – ಕುಮಟಾ ರಸ್ತೆಯನ್ನು ಬಳಸಲು ಜಿಲ್ಲಾಡಳಿತ ಸೂಚನೆ ನೀಡಿದೆ.
ತಮಿಳುನಾಡು, ಕೇರಳಕ್ಕೆ ಸಂಪರ್ಕ ಕಡಿತ
ಕಬಿನಿ ಡ್ಯಾಂನಿಂದ 70 ಸಾವಿರ ಕ್ಯೂಸೆಕ್ ನೀರು ಬಿಟ್ಟ ಕಾರಣ ಮೈಸೂರು ಜಿಲ್ಲೆಯ ನಂಜನಗೂಡು ಬಳಿ ರಾಷ್ಟ್ರೀಯ ಹೆದ್ದಾರಿ 766 ರಲ್ಲಿ ಸಂಚಾರ ಬಂದ್ ಮಾಡಲಾಗಿದೆ. ಪರಿಣಾಮವಾಗಿ ತಮಿಳುನಾಡು, ಕೇರಳಕ್ಕೆ ಸಂಪರ್ಕ ಭಾಗಶಃ ಕಡಿತಗೊಂಡಿದೆ. ನಂಜನಗೂಡಿನ ಮಲ್ಲನ ಮೂಲೆ ಮಠದ ಬಳಿ ರಸ್ತೆ ಜಲಾವೃತಗೊಂಡಿದ್ದು, ವಾಹನ ಸವಾರರು ಪರದಾಡುವಂತಾಗಿದೆ.
ಅಂಕೋಲಾ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸದ್ಯಕ್ಕಿಲ್ಲ ಸಂಚಾರ
ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆ ಹತ್ತಾರು ಅವಾಂತರಗಳನ್ನು ಸೃಷ್ಟಿ ಮಾಡಿದೆ. ಅದರಲ್ಲೂ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಚರಿಸುವ ವಾಹನ ಸವಾರರ ಜೀವ ಹಿಂಡುತ್ತಿದೆ. ಶಿರೂರು ಮತ್ತು ಬರ್ಗಿಯಲ್ಲಿ ಸಂಭವಿಸಿದ ಗುಡ್ಡ ಕುಸಿತದಿಂದ ಕಳೆದ ನಾಲ್ಕು ದಿನದಿಂದ ಹೆದ್ದಾರಿಯಲ್ಲಿ ಊಟ ನಿದ್ದೆ ಇಲ್ಲದೇ ಲಾರಿ ಚಾಲಕರು ಪರದಾಡುವ ಸ್ಥಿತಿ ನಿರ್ಮಾಣ ವಾಗಿದೆ.