ಬೆಂಗಳೂರು: ಕೆ.ಆರ್. ಪುರಂನಿಂದ ವೈಟ್ ಫೀಲ್ಡ್ ಮೆಟ್ರೋ ಕಾಮಗಾರಿ ಪೂರ್ಣವಾಗಿದ್ದು, ಮಾರ್ಚ್ 25ರಂದು ಉದ್ಘಾಟನೆಗೊಳ್ಳುವ ಸಾಧ್ಯತೆಯಿದೆ. ಆದರೆ, ಈ ಬಗ್ಗೆ ಮೆಟ್ರೋ ಅಧಿಕಾರಿಗಳು ಸ್ಪಷ್ಟತೆಯನ್ನು ನೀಡಿಲ್ಲ. ವಾಣಿಜ್ಯ ಸಂಚಾರಕ್ಕೆ ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರು ಕಳೆದ ಫೆ. 28ಕ್ಕೆ ಬಿಎಂಆರ್ಸಿಎಲ್ಗೆ ಸುರಕ್ಷತಾ ಕ್ಲಿಯರೆನ್ಸ್ ನೀಡಿದ್ದು, ಸದ್ಯ ಸರ್ಕಾರದ ಅನುಮೋದನೆಗಾಗಿ ಕಾಯುತ್ತಿದೆ. ಇನ್ನು ಪ್ರತಿ ರೈಲುಗಳು 12 ನಿಮಿಷಗಳಿಗೊಂದು ಓಡಾಡುವ ನಿರೀಕ್ಷೆಯಿದೆ. ನೇರಳೆ ಮಾರ್ಗದಲ್ಲಿ ಲೋಕೋ ಪೈಲೆಟ್ ಒಟ್ಟು 106 ಸಿಬ್ಬಂದಿ ಇದ್ದು,
ಅವರಲ್ಲಿ ಕೆಲವರನ್ನು ಕೆ.ಆರ್.ಪುರಂ ಮತ್ತು ವೈಟ್ಫೀಲ್ಡ್ ಮಾರ್ಗಕ್ಕೆ ಪಡೆಯುವ ಚಿಂತನೆಯನ್ನು ಬಿಎಂಆರ್ಸಿಎಲ್ ಹೊಂದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್, ಕೆ.ಆರ್.ಪುರ ಟು ವೈಟ್ ಫೀಲ್ಡ್ ಮೆಟ್ರೋ ಮುಕ್ತ ಸಂಚಾರಕ್ಕೆ ಅಧಿಕೃತವಾಗಿ ದಿನಾಂಕಗಳನ್ನು ನಿರ್ಧರಿಸಿಲ್ಲ. ಆದರೆ ಮಾರ್ಚ್ ತಿಂಗಳ ಅಂತ್ಯದೊಳಗಾಗಿ ಜನರ ಸೇವೆಗಾಗಿ ನೀಡಲು ಚಿಂತನೆ ನಡೆಸಲಾಗಿದೆ ಎಂದಿದ್ದಾರೆ.