ಧಾರಾಕಾರವಾಗಿ ಮಳೆ ಸುರಿಯುತ್ತಿರುವುದರಿಂದ ಮೈಸೂರು ಜಿಲ್ಲೆಯ ಎಲ್ಲಾ 9 ವಲಯಗಳ ಶಾಲೆಗಳಿಗೆ ಇಂದು ರಜೆ ಘೋಷಣೆ ಮಾಡಲಾಗಿದೆ. ಹವಾಮಾನ ಇಲಾಖೆ ಈಗಾಗಲೇ ಮುನ್ಸೂಚನೆ ನೀಡಿದ್ದು, ವಾಯುಭಾರ ಕುಸಿತದ ಹಿನ್ನಲೆ, ಕರ್ನಾಟಕದ ಒಳನಾಡಿನಲ್ಲಿ ಜುಲೈ 22 ರ ವರೆಗೂ ವ್ಯಾಪಕ ಮಳೆಯಾಗಲಿದೆ ಎಂದು ಅಲರ್ಟ್ ನೀಡಿದೆ.
ಮೈಸೂರು ನದಿ ಪಾತ್ರದ ಗ್ರಾಮಗಳ ಜನರ ಸುರಕ್ಷತೆಗೆ ಅಧಿಕಾರಿಗಳು ಮುಂಜಾಗ್ರತಾ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀ ಕಾಂತ ರೆಡ್ಡಿ ಸೂಚನೆ ನೀಡಿದ್ದಾರೆ. ”ಜಿಲ್ಲೆಯಾದ್ಯಂತ ಮಳೆ ಹೆಚ್ಚಾಗಿದ್ದು, ಈಗಾಗಲೇ ಕಬಿನಿ ಜಲಾಶಯದಿಂದ ಸುಮಾರು 70 ಸಾವಿರ ಕ್ಯುಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ.
ಅಲ್ಲದೆ ನುಗು ಡ್ಯಾಮ್ ನಿಂದಲೂ ನೀರನ್ನು ಹೊರ ಬಿಡಲಾಗುತ್ತಿದೆ,” ಎಂದರು. ”ಮುಂದಿನ ಶನಿವಾರದ ಒಳಗೆ ಕೆಆರ್ಎಸ್ ಜಲಾಶಯದಿಂದ ನೀರನ್ನು ಹೊರಬಿಡುವ ಸಂಭವವಿದ್ದು, ತಿ.ನರಸೀಪುರ, ನಂಜನಗೂಡು ನದಿ ಪಾತ್ರದ ಜನರ ಸುರಕ್ಷತೆಗಾಗಿ ಅಧಿಕಾರಿಗಳು ಅಗತ್ಯ ಕ್ರಮ ವಹಿಸಬೇಕು,” ಎಂದು ತಿಳಿಸಿದರು.