ಹಾಸನ, : ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಶಿರಾಡಿ ಘಾಟ್ ಸಂಚಾರ ಬಂದ್ ಆದೇಶವನ್ನು ಜಿಲ್ಲಾಡಳಿತ ಹಿಂಪಡೆದಿದ್ದು, ಸಂಚಾರಕ್ಕೆ ಅನುವುಮಾಡಿಕೊಟ್ಟಿದೆ. ಆದರೆ, ನಿರ್ಬಂಧಿತ ನಿಯಮಗಳಡಿ ಸಂಚಾರಕ್ಕೆ ಅವಕಾಶ ನೀಡಿ ಹೊಸ ಆದೇಶ ಹೊರಡಿಸಿದೆ. ನಿನ್ನೆ(ಗುರುವಾರ) ಬೆಳಿಗ್ಗೆ ದೊಡ್ಡತಪ್ಲು ಬಳಿ ಗುಡ್ಡ ಕುಸಿತ ಸಂಭವಿಸಿ, ತಾತ್ಕಾಲಿಕ ತಡೆ ಹೇರಲಾಗಿತ್ತು. ಇದೀಗ ಅದನ್ನು ವಾಪಾಸ್ ಪಡೆದು, ಷರತ್ತು ನೀಡಿ ಸಂಚಾರಕ್ಕೆ ಮುಕ್ತ ಮಾಡಿದೆ.
ನಾಳೆ(ಶನಿವಾರ) ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಹೌದು, ಮಂಗಳೂರು-ಬೆಂಗಳೂರು ನಡುವೆ ವಾಹನ ಸಂಚಾರ ಸಂಪೂರ್ಣ ನಿರ್ಬಂಧದಿಂದ ದೊಡ್ಡ ಸಮಸ್ಯೆ ಆದ ಹಿನ್ನೆಲೆಯಲ್ಲಿ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೂ, ನಿರ್ಬಂಧಿತ ಸಂಚಾರಕ್ಕೆ ಅವಕಾಶ ನೀಡಿ ಸಕಲೇಶಪುರ ಉಪ ವಿಭಾಗ ಅದಿಕಾರಿ ಶೃತಿ ಆದೇಶಿಸಿದ್ದಾರೆ.
ಇನ್ನು ನಿನ್ನೆ ರಾತ್ರಿಯಿಂದ ವಾಹನ ಸಂಚಾರ ನಿರ್ಬಂಧ ಹಿನ್ನೆಲೆಯಲ್ಲಿ ರಸ್ತೆ ಮಧ್ಯೆಯೇ ನೂರಾರು ವಾಹನಗಳು ನಿಂತಿದ್ದು, ನಡು ರಸ್ತೆಯಲ್ಲಿಯೇ ದೊಡ್ಡ ದೊಡ್ಡ ಟ್ರಕ್ ಹಾಗೂ ಲಾರಿಗಳ ಚಾಲಕರು ಪರದಾಡುವಂತಾಗಿದೆ. ಊಟ, ತಿಂಡಿ, ಕುಡಿಯುವ ನೀರು, ಶೌಚಾಲಯ ಇಲ್ಲದೆ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಇನ್ನು ಸರತಿ ಸಾಲಿನಲ್ಲಿ ಸಾವಿರಾರು ವಾಹನಗಳು ನಿಂತಿದ್ದು, ಚಿಕ್ಕಮಗಳೂರು ಜಿಲ್ಲೆಯ ಚಾರ್ಮಾಡಿ ಘಾಟ್ ಹಾಗೂ ಕೊಡಗು ಜಿಲ್ಲೆಯ ಸಂಪಾಜೆ ಮಾರ್ಗದಲ್ಲೂ ಸಂಚಾರಕ್ಕೆ ಸಮಸ್ಯೆಯಾಗಿದೆ. ಎಲ್ಲಾ ಮಾರ್ಗದಲ್ಲೂ ಮಳೆ ಹೆಚ್ಚಾಗಿರೊ ಹಿನ್ನೆಲೆಯಲ್ಲಿ ಶಿರಾಡಿಘಾಟ್ ಮಾರ್ಗದ ವಾಹನಗಳು ಎಲ್ಲೂ ಹೊಕಗಲಾಗದೆ ಸಂಕಷ್ಟಕ್ಕೆ ಸಿಲುಕಿದೆ.