ಸರ್ಕಾರಿ ನೇಮಕಾತಿಗಳಲ್ಲಿ ಮೀಸಲಾತಿ ವಿರೋಧಿಸಿ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆ ಮತ್ತಷ್ಟು ಹಿಂಸಾತ್ಮಕ ರೂಪಕ್ಕೆ ತಿರುಗಿದೆ. ಢಾಕಾ ಸೇರಿದಂತೆ ದೇಶದ ವಿವಿಧೆಡೆ ನಡೆದ ಗಲಭೆಯಲ್ಲಿ ಒಟ್ಟು 105 ಮಂದಿ ಮೃತಪಟ್ಟಿದ್ದಾರೆ. ಪ್ರತಿಭಟನೆ ಮತ್ತಷ್ಟು ತೀವ್ರತೆ ಪಡೆದುಕೊಳ್ಳುವುದರಿಂದ ಎಚ್ಚೆತ್ತ 300ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ತವರಿಗೆ ಮರಳಿದ್ದಾರೆ.
ಬಾಂಗ್ಲಾದೇಶದಲ್ಲಿ 15 ಸಾವಿರ ಮಂದಿ ಭಾರತೀಯರು ಇದ್ದಾರೆ ಎಂದು ಹೇಳಲಾಗಿದೆ. ಶುಕ್ರವಾರ 300ಕ್ಕೂ ಹೆಚ್ಚು ಮಂದಿ ತವರಿಗೆ ಮರಳಿದ್ದಾರೆ. ಬಂದವರಲ್ಲಿ ಬಹುತೇಕರು ಎಂಬಿಬಿಎಸ್ ವ್ಯಾಸಂಗಕ್ಕೆ ತೆರಳಿದ್ದರು. ಅಲ್ಲದೇ ಉತ್ತರ ಪ್ರದೇಶ, ಹರಿಯಾಣ, ಮೇಘಾಲಯ ಮತ್ತು ಜಮ್ಮು ಮತ್ತು ಕಾಶ್ಮೀರ ಮೂಲದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ವರದಿಯಾಗಿದೆ. ಇದೀಗ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ 300ಕ್ಕೂ ಅಧಿಕ ವಿದ್ಯಾರ್ಥಿಗಳು ಭಾರತಕ್ಕೆ ಮರಳಿದ್ದು ಸದ್ಯದಲ್ಲೇ ಮತ್ತಷ್ಟು ಮಂದಿ ಭಾರತಕ್ಕೆ ವಾಪಸ್ ಆಗಲಿದ್ದಾರೆ.
ಮೀಸಲಾತಿ ವಿರೋಧಿಸಿ ಹೋರಾಟ ನಡೆಸುತ್ತಿರುವವರು ಹಾಗೂ ಭದ್ರತಾ ಪಡೆಗಳ ನಡುವಿನ ಸಂಘರ್ಷದಲ್ಲಿ ಕನಿಷ್ಠ 105 ಮಂದಿ ಮೃತಪಟ್ಟಿದ್ದು, 2,500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಗುರುವಾರ ಹೋರಾಟ ತೀವ್ರಗೊಂಡ ನಂತರ ಗಲಭೆ ನಿಯಂತ್ರಿಸಲು ಬಾಂಗ್ಲಾದೇಶದ ಹಲವೆಡೆ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಕಡಿತಗೊಳಿಸಲಾಗಿತ್ತು. ಇದರಿಂದ ಬೇಸರಗೊಂಡ ವಿದ್ಯಾರ್ಥಿಗಳು ಢಾಕಾದಲ್ಲಿ ಕೋಲು, ದೊಣ್ಣೆ ಮತ್ತು ಕಲ್ಲುಗಳೊಂದಿಗೆ ರಸ್ತೆಗಿಳಿದು ಹೆದ್ದಾರಿಗಳನ್ನು ತಡೆದಿದ್ದರು. ಸರ್ಕಾರಿ ಕಟ್ಟಡಗಳನ್ನು ಹಾನಿಗೊಳಿಸಿ, ಸಶಸ್ತ್ರ ಪೊಲೀಸರರೊಂದಿಗೆ ಘರ್ಷಣೆಗೆ ಇಳಿದಿದ್ದರಿಂದ ಪರಿಸ್ಥಿತಿ ಉದ್ವಿಗ್ನಗೊಂಡಿತು.