ಬಾಲಿವುಡ್ ಚಿತ್ರರಂಗದಲ್ಲಿ ಸ್ಟಾರ್ ನಟಿಯರು ಬ್ಯಾಕ್ ಟು ಬ್ಯಾಕ್ ಹಸೆಮಣೆ ಏರುತ್ತಿದ್ದಾರೆ. ಸಿನಿಮಾ ರಂಗದಲ್ಲಿ ಸಾಕಷ್ಟು ಬೇಡಿಕೆ ಇರುವಾಗಲೇ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಅಂತೆಯೇ ಬಾಲಿವುಡ್ ಖ್ಯಾತ ನಟಿ ಶ್ರದ್ಧಾ ಕಪೂರ್ ಕೂಡ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ. ಈ ಬಗ್ಗೆ ಸ್ವತಃ ನಟಿಯೇ ಸ್ಪಷ್ಟನೆ ನೀಡಿದ್ದಾರೆ.
ಸದ್ಯ ಶ್ರದ್ಧ ಕಪೂರ್ ಸ್ತ್ರಿ 2 ಸಿನಿಮಾದಲ್ಲಿ ತೊಡಗಿಕೊಂಡಿದ್ದಾರೆ. ಈ ಚಿತ್ರದ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವೇಳೆ ಮದುವೆ ಬಗ್ಗೆ ಪ್ರಶ್ನೆ ಎದುರಾಗಿದೆ. ಇದಕ್ಕೆ ಜಾಣತನದಿಂದ ಉತ್ತರಿಸಿದ ಶ್ರದ್ಧಾ ಆಕೆ ಸ್ತ್ರಿ, ಆಕೆಗೆ ಇಷ್ಟ ಬಂದಾಗ ಮದುಮಗಳು ಆಗುತ್ತಾಳೆ ಎಂದಿದ್ದಾರೆ.
‘ಸ್ತ್ರೀ 2’ ಸಿನಿಮಾದಲ್ಲಿ ಹಾರರ್ ಕಥಾಹಂದರ ಇದೆ. ಈ ಚಿತ್ರದ ಟ್ರೇಲರ್ ಅನಾವರಣ ಮಾಡಲಾಗಿದೆ. ರಾಜ್ಕುಮಾರ್ ರಾವ್, ಪಂಕಜ್ ತ್ರಿಪಾಠಿ, ಅಭಿಷೇಕ್ ಬ್ಯಾನರ್ಜಿ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಆಗಸ್ಟ್ 15ರಂದು ‘ಸ್ತ್ರೀ 2’ ಸಿನಿಮಾ ಬಿಡುಗಡೆ ಆಗಲಿದೆ. ಟ್ರೇಲರ್ ಮತ್ತು ಟೀಸರ್ ಮೂಲಕ ಈ ಸಿನಿಮಾ ಸಖತ್ ಕೌತುಕ ಮೂಡಿಸಿದೆ. ಈ ಚಿತ್ರಕ್ಕೆ ದಿನೇಶ್ ವಿಜನ್ ಅವರು ಬಂಡವಾಳ ಹೂಡಿದ್ದಾರೆ. ಈ ವರ್ಷ ಅವರು ನಿರ್ಮಾಣ ಮಾಡಿದ್ದ ‘ಮುಂಜ್ಯ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸೂಪರ್ ಹಿಟ್ ಆಯಿತು. ಈಗ ಅವರು ‘ಸ್ತ್ರೀ 2’ ಚಿತ್ರದಿಂದ ಅದೇ ರೀತಿ ಗೆಲುವು ಕಾಣುವ ನಿರೀಕ್ಷೆಯಲ್ಲಿದ್ದಾರೆ.
2018ರಲ್ಲಿ ‘ಸ್ತ್ರೀ’ ಸಿನಿಮಾ ಬಿಡುಗಡೆ ಆಗಿತ್ತು. ಆ ಚಿತ್ರದ ಯಶಸ್ಸಿನ ಬಳಿಕ ‘ಸ್ತ್ರೀ 2’ ಅನೌನ್ಸ್ ಮಾಡಲಾಯಿತು. ಈಗ ‘ಸ್ತ್ರೀ 2’ ಬಿಡುಗಡೆಗೆ ಸಜ್ಜಾಗಿದೆ. ವಿಶೇಷ ಏನೆಂದರೆ, ನಿರ್ಮಾಪಕರು ‘ಸ್ತ್ರೀ 3’ ಬಗ್ಗೆಯೂ ಪ್ಲ್ಯಾನ್ ರೆಡಿ ಮಾಡಿದ್ದಾರೆ. ಈಗಾಗಲೇ ಇದಕ್ಕೆ ಕಥೆ ಸಿದ್ಧವಾಗಿದೆ. ಆದಷ್ಟು ಬೇಗ ‘ಸ್ತ್ರೀ 3’ ಬಗ್ಗೆ ಹೆಚ್ಚಿನ ಮಾಹಿತಿ ಹೊರಬೀಳಲಿದೆ. ಈಗ ‘ಸ್ತ್ರೀ 2’ ಎಷ್ಟು ಕಲೆಕ್ಷನ್ ಮಾಡಲಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.
ಇನ್ನೂ ಶ್ರದ್ಧಾ ಹೆಸರು ಪ್ರಸ್ತುತ ರಾಹುಲ್ ಮೋದಿ ಜೊತೆ ಕೇಳಿ ಬರುತ್ತಿದೆ. ಇಬ್ಬರ ಕುರಿತು ಡೇಟಿಂಗ್ ಸುದ್ದಿ ಹಬ್ಬಿದೆ. ಅದಕ್ಕೆ ಪೂರಕವೆಂಬಂತೆ, ಅಂಬಾನಿ ಮಗನ ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ಹಾಗಾಗಿ ಶೀಘ್ರದಲ್ಲಿಯೇ ಮದುವೆ ಆಗಲಿದ್ದಾರೆ ಎನ್ನಲಾಗಿದೆ.