ಸ್ಯಾಂಡಲ್ ವುಡ್ ನ ಅನೇಕ ಹಾಡುಗಳಿಗೆ ಧ್ವನಿಯಾದ ಹಂಸಲೇಖ ಅವರು ಇಂದಿಗೂ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆ ಕಾಯ್ದುಕೊಂಡಿದ್ದಾರೆ. ತಮ್ಮ ಹಾಡುಗಳ ಮೂಲಕ ಪ್ರತಿಯೊಬ್ಬರನ್ನು ಮೋಡಿ ಮಾಡುವ ಹಂಸಲೇಖ ಅವರು ಆಗಾಗ ವೈಯಕ್ತಿವಾಗಿ ಕೆಲವೊಮ್ಮೆ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ. ಇತ್ತೀಚೆಗೆ ಅವರು ಜೈನ ಸಮುದಾಯದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು. ಇದು ಸಾಕಷ್ಟು ವಿವಾದ ಸೃಷ್ಟಿ ಮಾಡಿತ್ತು. ಅನೇಕರು ಹಂಸಲೇಖ ಬಳಿ ಕ್ಷಮೆ ಕೇಳುವಂತೆ ಆಗ್ರಹಿಸಿದ್ದರು. ಅಂತೆಯೇ ಹಂಸಲೇಖ ಅವರು ಇದೀಗ ಕ್ಷಮೆ ಕೇಳಿದ್ದಾರೆ.
ಇತ್ತೀಚೆಗೆ ಕಾರ್ಯಕ್ರಮ ಒಂದರಲ್ಲಿ ಮಾತನಾಡಿದ್ದ ಹಂಸಲೇಖ ಅವರು ‘ಜೈನರ ಫಿಲಾಸಫಿಯಲ್ಲಿ 24 ಜನ್ಮಗಳು ಇವೆಯಂತೆ. ಅದೆಲ್ಲ ಸುಳ್ಳು, ಬುಲ್ಶಿಟ್’ ಎಂದು ಹೇಳಿದ್ದರು ಹಂಸಲೇಖ. ಇದಕ್ಕೆ ಜೈನ ಧರ್ಮದವರು ವಿರೋಧ ವ್ಯಕ್ತಪಡಿಸಿದ್ದಾರೆ. ‘ಹಂಸಲೇಖ ಅವರು ಸಾರ್ವಜನಿಕವಾಗಿ ಜೈನ ಧರ್ಮವನ್ನು ಹೀಯಾಳಿಸಿದ್ದು ಸರಿ ಅಲ್ಲ. ಜಗತ್ತಿನ ಅತೀ ದೊಡ್ಡ ಅಂಹಿಸಾಮಯ ಹಾಗೂ ದಾನಧರ್ಮಗಳಲ್ಲಿ ಅಗ್ರ ಸ್ಥಾನದಲ್ಲಿ ಇರುವ ಜೈನ ಧರ್ಮವನ್ನು ಟೀಕಿಸಿದ ಹಂಸಲೇಖ ಈಗಲೇ ಕ್ಷಮೆ ಕೇಳಬೇಕು’ ಎಂದು ಜೈನ ಧರ್ಮದವರು ಆಗ್ರಹಿಸಿದ್ದರು.
ಈಗ ಹಂಸಲೇಖ ಅವರು ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದಾರೆ. ಜೊತೆಗೆ ಇದು ಬಾಯ್ತಪ್ಪಿನಿಂದ ಆಡಿರೋ ಮಾತು ಎಂದಿರೋ ಅವರು, ಇನ್ಮುಂದೆ ಈ ರೀತಿಯ ತಪ್ಪನ್ನು ಮಾಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ.
‘ದಯಮಾಡಿ ಕ್ಷಮಿಸಿ. ನಾನು ಯಾವತ್ತೂ ಅದರ ವಿರುದ್ಧ ಮಾತನಾಡಬೇಕು ಎಂದು ಯೋಚನೆ ಮಾಡಿದವನಲ್ಲ. ಆ ಪದವನ್ನು ಬಳಕೆ ಮಾಡಬೇಕು ಎಂದು ಕೂಡ ನಾನು ಅಂದುಕೊಂಡಿಲ್ಲ. ನಾನಿದ್ದ ಜಾಗದಲ್ಲಿ ಎಲ್ಲರೂ ಎಳೆದಾಡುತ್ತಿದ್ದರು. ಅವರಿಗೆ ಗದರೋಕೆ ಹೋಗಿ ಈಕಡೆ ಬಂದೆ. ಆ ಮಾತು ಬಂದಿದ್ದು ತಪ್ಪಾಯ್ತು. ಇನ್ನು ಎಂದಿಗೂ ಆ ಮಾತನ್ನು ಆಡಲ್ಲ. ನಾನು ಪಂಪನ ದಾಸಾನು ದಾಸ. ಕನ್ನಡ ಕಟ್ಟಿದ ಆ ಮಹಾನ್ ವ್ಯಕ್ತಿಯ ಸೇವೆಗೆ ನಿಂತಿದ್ದೇನೆ. ಇದನ್ನು ದಯಮಾಡಿ ಬೆಳೆಸಬೇಡಿ. ಪತ್ರದಲ್ಲಿ ಬರೆದು ಪೋಸ್ಟ್ ಮಾಡಿ ಕ್ಷಮೆ ಕೇಳಿದ್ದೇನೆ. ಅದೇ ನನ್ನ ಧ್ವನಿ ಎಂದುಕೊಳ್ಳಿ’ ಎಂದಿದ್ದಾರೆ ಅವರು.