ತೋಟಗಾರಿಕೆ ಇಲಾಖೆ ಸಚಿವ ಮುನಿರತ್ನ (Muniratna)ಅವರ ವಿರುದ್ಧ ಸರಣೀಯ ಟ್ವೀಟ್ ಮಾಡಿದ್ದಾರೆ ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy). ಉರಿಗೌಡ (Urigowda)-ನಂಜೇಗೌಡ (Nanjegowda) ಕುರಿತಾದ ಸಿನಿಮಾ ಮಾಡಲು ಮುನಿರತ್ನ ತಯಾರಾಗಿದ್ದರು.
ತಮ್ಮದೇ ಬ್ಯಾನರ್ ನಲ್ಲಿ ‘ಉರಿಗೌಡ-ನಂಜೇಗೌಡ’ ಟೈಟಲ್ ಗಾಗಿ ಅರ್ಜಿಯನ್ನೂ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಲ್ಲಿಸಿದ್ದರು. ವಾಣಿಜ್ಯ ಮಂಡಳಿಗೆ ಸಲ್ಲಿಸಿದ ಅರ್ಜಿಯೊಂದಿಗೆ ಕುಮಾರಸ್ವಾಮಿ ಸರಣೀಯ ಟ್ವೀಟ್ ಮಾಡಿದ್ದಾರೆ.
ಕಲ್ಪಿತಕಥೆ, ಸುಳ್ಳುಗಳಿಂದಲೇ ಜನರ ಮನಸ್ಸಿನಲ್ಲಿ ವಿಷ ಬೀಜ ಬಿತ್ತಿ, ಕರ್ನಾಟಕವನ್ನು ಅಲ್ಲೋಲಕಲ್ಲೋಲ ಮಾಡುತ್ತಿರುವ ಬಿಜೆಪಿ ವಕ್ರದೃಷ್ಟಿ ಸದ್ಯಕ್ಕೆ ಒಕ್ಕಲಿಗರ ಮೇಲೆ ಬಿದ್ದಿದೆ. ಸ್ವಾಭಿಮಾನಿ ಒಕ್ಕಲಿಗರನ್ನು ಹೇಗಾದರೂ ಹಳ್ಳ ಹಿಡಿಸಲೇಬೇಕೆಂಬ ಹಿಡೆನ್ ಅಜೆಂಡ್ ಬಿಜೆಪಿಗೆ ಇರುವುದಂತೂ ಸತ್ಯ ಎಂದು ಟ್ವಿಟ್ ಮಾಡಿದ್ದಾರೆ ಕುಮಾರಸ್ವಾಮಿ.
ಮುನಿರತ್ನ ವಿರುದ್ಧವೂ ಟ್ವಿಟ್ ಮಾಡಿರುವ ಅವರು, ‘ಸಚಿವರು ವೃತ್ತಿಯಲ್ಲಿ ಚಿತ್ರ ನಿರ್ಮಾಪಕರಾದ ಶ್ರೀ ಮುನಿರತ್ನ ಅವರು ತಮ್ಮ ವೃಷಭಾದ್ರಿ ಪ್ರೊಡಕ್ಷನ್ ಮೂಲಕ ಉರಿಗೌಡ-ನಂಜೇಗೌಡ’ ಹೆಸರನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೋಂದಾಯಿಸಿ ಸಿನಿಮಾ ಮಾಡಲು ಹೊರಟಿದ್ದಾರೆ. ಈ ಮೂಲಕ ಒಕ್ಕಲಿಗರ ಗೌರವವನ್ನು ಬೆಳ್ಳಿತೆರೆಯ ಮೇಲೆಯೂ ಮೂರಾಬಟ್ಟೆ ಮಾಡಲು ಸಂಚು ರೂಪಿಸಿದ್ದಾರೆ’ ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ ಕುಮಾರಸ್ವಾಮಿ.
ಹೀಗೆ ಒಂದರ ಮೇಲೊಂದು ಹನ್ನೊಂದು ಟ್ವೀಟ್ ಗಳನ್ನು ಮಾಡಿರುವ ಕುಮಾರಸ್ವಾಮಿ, ಯಾರೆಲ್ಲ ಕಥೆ ಬರೆದಿದ್ದಾರೆ, ಏನೆಲ್ಲ ಸುಳ್ಳುಗಳನ್ನು ಹೇಳಲಿದ್ದಾರೆ ಎನ್ನುವುದನ್ನೂ ಹೇಳಿದ್ದಾರೆ. ಇವತ್ತು ಬೆಳಗ್ಗೆಯಿಂದ ಉರಿಗೌಡ ನಂಜೇಗೌಡ ಸಿನಿಮಾದ್ದೆ ಸ್ಯಾಂಡಲ್ ವುಡ್ ನಲ್ಲಿ ಹೆಚ್ಚು ಸುದ್ದಿಯಾಗಿದೆ. ಚುನಾವಣೆ ಹತ್ತಿರ ಇರುವಾಗಲೇ ಇಂಥದ್ದೊಂದು ಚರ್ಚೆ ಭಾರೀ ಕುತೂಹಲ ಮೂಡಿಸಿದೆ.