ಚುಣಾವಣಾ ಪ್ರಚಾರದ ವೇಳೆ ಗುಂಡೇಟಿಗೆ ಒಳಗಾಗಿ ಗಾಯಗೊಂಡಿದ್ದ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರೀಕ್ಷೆಯಂತೆ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಟ್ರಂಪ್ಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯ ಡಾ. ರೋನಿ ಎಲ್. ಜಾಕ್ಸನ್ ತಿಳಿಸಿದ್ದಾರೆ.
ಡಾ. ರೋನಿ ಅವರು ಟ್ರಂಪ್ ಅಮೆರಿಕ ಅಧ್ಯಕ್ಷರಾಗಿದ್ದಾಗ ಅವರ ವೈದ್ಯರಾಗಿ ಕೆಲಸ ಮಾಡಿದ್ದರು. ಈ ಕುರಿತು ಮಾತನಾಡಿದ ಅವರು, ‘ಟ್ರಂಪ್ ಅವರನ್ನು ನ್ಯೂಜೆರ್ಸಿಯ ಬೆಡ್ಮಿನ್ಸ್ಟರ್ನಲ್ಲಿ ವೈಯಕ್ತಿಕವಾಗಿ ಭೇಟಿಯಾಗಿರುವೆ. ಅವರಿಗಾದ ಗಾಯವನ್ನು ತಪಾಸಣೆ ಮಾಡಿ ಚಿಕಿತ್ಸೆ ನೀಡಿದ್ದೇನೆ. ಅವರೊಂದಿಗೆ ಸದಾ ಇರುತ್ತೇನೆ. ಟ್ರಂಪ್ ಅವರು ತ್ವರಿತವಾಗಿ ಚೇತರಿಸಿಕೊಳ್ಳುತ್ತಿದ್ದಾರೆ’ ಎಂದು ಹೇಳಿದ್ದಾರೆ..
‘ಟ್ರಂಪ್ ಅವರ ಬಲ ಕಿವಿಗೆ 2 ಸೆಂ.ಮೀನಷ್ಟು ಅಗಲದ ಗಾಯವಾಗಿದೆ. ಆರಂಭದಲ್ಲಿ ರಕ್ತಸ್ರಾವ ಕಾಣಿಸಿಕೊಂಡಿತ್ತು, ಜತೆಗೆ ಕಿವಿಯ ಮೇಲ್ಬಾಗದಲ್ಲಿ ಊತವಿತ್ತು. ಆದರೆ ಈಗ ಊತ ಕಡಿಮೆಯಾಗಿದ್ದು, ಗಾಯವು ವಾಸಿಯಾಗಲು ಆರಂಭಿಸಿದೆ. ಗಾಯಕ್ಕೆ ಯಾವುದೇ ಹೊಲಿಗೆಗಳನ್ನು ಹಾಕಲಾಗಿಲ್ಲ’ ಎಂದೂ ಅವರು ತಿಳಿಸಿದ್ದಾರೆ
ಕಳೆದ ಶನಿವಾರ (ಜುಲೈ 13) ಪೆನ್ಸಿಲ್ವೇನಿಯಾದಲ್ಲಿ ಆಯೋಜನೆಗೊಂಡಿದ್ದ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಟ್ರಂಪ್ ಅವರ ಮೇಲೆ ದಾಳಿ ನಡೆದಿತ್ತು. ಈ ವೇಳೆ ಪ್ರೇಕ್ಷಕನೊಬ್ಬ ಮೃತಪಟ್ಟು, ಟ್ರಂಪ್ ಸೇರಿದಂತೆ ಮೂವರು ಗಾಯಗೊಂಡಿದ್ದರು.