ರಾಮನಗರ:- ಜಿಲ್ಲೆಯ ಹೆಸರು ಬದಲಾವಣೆ ವಿಚಾರದ ಬಗ್ಗೆ ಡಿಸಿಎಂ ಡಿಕೆಶಿ ವಿರುದ್ಧ ಕೇಂದ್ರ ಸಚಿವ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಇವರ ಬ್ರ್ಯಾಂಡ್ ಬೆಂಗಳೂರು ರೀತಿ ರಾಮನಗರವನ್ನೂ ಅಭಿವೃದ್ಧಿ ಮಾಡಬೇಕಾ? ರಾಮನಗರ ಜಿಲ್ಲೆ ಅಭಿವೃದ್ಧಿಯಾಗಿ ಹತ್ತು ವರ್ಷಗಳಾಯಿತು. ಇವರು ಬಂದು ಏನು ಅಭಿವೃದ್ಧಿ ಮಾಡುತ್ತಾರೆ?
ಈಗ ಬೆಂಗಳೂರಿನ ಜಾಗವನ್ನು ಯಾವನಿಗೋ 45 ಸಾವಿರ ಕೋಟಿಗೆ ಮೂವತ್ತು ವರ್ಷ ಲೀಸ್ʼಗೆ ಕೊಡಲು ಹೊರಟಿದ್ದಾರೆ. ಬ್ರ್ಯಾಂಡ್ ಬೆಂಗಳೂರು ಮಾಡೋದು ಕಸ ತುಂಬಿಸಲಿಕ್ಕಾ? ರಾಮನಗರ ತೆಗೆದು ಬೆಂಗಳೂರು ದಕ್ಷಿಣ ಹೆಸರಿಡುವುದು ಬೆಂಗಳೂರಿನ ಕಸ ತಂದು ತುಂಬಿಸಲಿಕ್ಕಾ? ಕಪ್ಪುಪಟ್ಟಿಯಲ್ಲಿ ಇದ್ದವರನ್ನು ಕರೆದುಕೊಂಡು ಬಂದು ಲೀಸ್ ಕೊಡಲು ಹೊರಟಿದ್ದೀರಾ? ಸುಮ್ಮನೆ ಬಾಯಿ ಚಪಲಕ್ಕೆ ಹೇಳುತ್ತಿಲ್ಲ ನಾನು, ಸರ್ಕಾರದಲ್ಲಿ ಏನೇನು ನಡೆದಿದೆ ಎಲ್ಲಾ ಮಾಹಿತಿ ಸಂಗ್ರಹ ಮಾಡಿದ್ದೇನೆ ಎಂದು ಹೇಳಿದರು.
ಚನ್ನಪಟ್ಟಣ ಉಪ ಚುನಾವಣೆ ಅಭ್ಯರ್ಥಿ ಬಗ್ಗೆ ಇನ್ನು ನಿರ್ಧಾರ ಮಾಡಿಲ್ಲ. ಯಾರೇ ಅಭ್ಯರ್ಥಿಯಾದರೂ ಅವರು
ಎನ್ಡಿಎ ಅಭ್ಯರ್ಥಿಯಾಗುತ್ತಾರೆ. ಎನ್ಡಿಎ ಅಭ್ಯರ್ಥಿ ನಿಲ್ಲುವುದಷ್ಟೇ ಅಲ್ಲ, ಗೆಲ್ಲಲೇಬೇಕು. ಗೆಲ್ಲುವುದಕ್ಕೆ ಏನೆಲ್ಲಾ ನಿರ್ಧಾರ ಮಾಡಬೇಕೋ ಅದನ್ನೆಲ್ಲಾ ಮಾಡುತ್ತೇವೆ. ಯಾರು ಅಭ್ಯರ್ಥಿ ಎಂದು ಇನ್ನೂ ಚರ್ಚೆ ಹಂತಕ್ಕೆ ಬಂದಿಲ್ಲ. ಕೇಂದ್ರದ ನಾಯಕರು, ರಾಜ್ಯದ ಬಿಜೆಪಿ ನಾಯಕರು ಎಲ್ಲಾ ಕುಳಿತು ಚರ್ಚೆ ಮಾಡುತ್ತೇವೆ. ಯೋಗೇಶ್ವರ್ ಅವರು ಗೆಲ್ಲಲು ಅವಕಾಶ ಇದ್ದರೆ ಅವರೇ ಚುನಾವಣೆಗೆ ನಿಲ್ಲುತ್ತಾರೆ. ಇಲ್ಲವೆಂದರೆ ಬೇರೆ ಅಭ್ಯರ್ಥಿಯನ್ನು ನಿಲ್ಲಿಸುತ್ತೇವೆ ಎಂದು ಕುಮಾರಸ್ವಾಮಿ ಅವರು ಪ್ರಶ್ನೆಯೊಂದಕ್ಕೆ ಉತ್ತರ ಕೊಟ್ಟರು.
ಸ್ಥಳೀಯ ಕಾರ್ಯಕರ್ತನಿಗೆ ಟಿಕೆಟ್ ಕೊಡಬೇಕಾ? ಎನ್ನುವ ಬಗ್ಗೆ ತೀರ್ಮಾನ ಮಾಡುತ್ತೇವೆ. ನಾನು ಮೊದಲಿನಿಂದಲೂ ಹೇಳುತ್ತಿದ್ದೇನೆ. ಹಾಸನದಲ್ಲಿ ಒಬ್ಬ ಕಾರ್ಯಕರ್ತನನ್ನು ನಿಲ್ಲಿಸಿ ಗೆಲ್ಲಿಸುತ್ತೇನೆ ಎಂದು ಹೇಳಿದ್ದೆ. ಗೆಲ್ಲಿಸಲಿಲ್ಲವೇ? ನಮ್ಮ ಪಕ್ಷಕ್ಕೆ ಆ ಶಕ್ತಿ ಇದೆ, ಚನ್ನಪಟ್ಟಣದಲ್ಲೂ ಅಷ್ಟೇ ಎಂದು ಅವರು ಹೇಳಿದರು.