ಖ್ಯಾತ ನಟ ಶರತ್ ಬಾಬು ನಿಧನರಾಗಿ ವರ್ಷ ಕಳೆದಿದೆ. ಕನ್ನಡ, ತಮಿಳು, ಮಲಯಾಳಂ, ತೆಲಗು ಹಾಗೂ ಹಿಂದಿ ಸೇರಿದಂತೆ 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದ ಶರತ್ ಬಾಬು ಅಪಾರ ಆಸ್ತಿಯನ್ನು ಹೊಂದಿದ್ದರು. ಯಾವುದೇ ವಾರಸುದಾರರಿಲ್ಲದ ಶರತ್ ಬಾಬು ಆಸ್ತಿ ಯಾರ ಪಾಲಾಗಿದೆ ಎಂಬುದರ ಬಗ್ಗೆ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ಶುರುವಾಗಿವೆ. ಶರತ್ ಬಾಬು ಎರಡು ಮದುವೆಯಾಗಿದ್ದರೂ ವಿಚ್ಛೇಧನ ಪಡೆದುಕೊಂಡಿದ್ದಾರೆ. ತಮ್ಮ ಕೊನೆಯ ಕಾಲದಲ್ಲಿ ಒಂಟಿಯಾಗಿ ಶರತ್ ಬಾಬು ಜೀವನ ಕಳೆದಿದ್ದರು. ಇಷ್ಟು ಮಾತ್ರವಲ್ಲದೇ ಶರತ್ ಬಾಬು ಕೆಲ ನಟಿಯರ ಜೊತೆ ಸಂಬಂಧ ಹೊಂದಿದ್ದರು ಎಂಬ ಸುದ್ದಿ ಕೇಳಿ ಬಂದಿತ್ತು. ಇದೇ ಕಾರಣಕ್ಕೆ ಎರಡು ಮದುವೆಯಾದರೂ ಅದು ಕೊನೆಯವರೆಗೂ ಉಳಿಯಲಿಲ್ಲ ಎಂಬ ಮಾತುಗಳು ಕೇಳಿ ಬಂದಿತ್ತು.
1970ರಲ್ಲಿ ಸಿನಿಮಾ ರಂಗಕ್ಕೆ ಕಾಲಿಟ್ಟ ಶರತ್ ಬಾಬು, ಸೌತ್ ಇಂಡಸ್ಟ್ರಿಯಲ್ಲಿ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಹಲವು ವರ್ಷ ಬೆಂಗಳೂರಿನಲ್ಲಿಯೇ ನೆಲೆಸಿದ್ದ ಶರತ್ ಬಾಬು ಬಳಿಕ ಚೆನ್ನೈನಲ್ಲಿ ಸೆಟಲ್ ಆಗಿದ್ದರು. ತಮಿಳು ಸಿನಿಮಾ ಇಂಡಸ್ಟ್ರಿಯಲ್ಲಿ ರಜನಿಕಾಂತ್ ಸೇರಿದಂತೆ ಹಲವು ಅತ್ಯಾಪ್ತರನ್ನು ಹೊಂದಿರುವ ಕಾರಣ ಶರತ್ ಬಾಬು ಚೆನ್ನೈಗೆ ಶಿಫ್ಟ್ ಆಗಿದ್ದರು. ಸೂಪರ್ ಸ್ಟಾರ್ ರಜನಿಕಾಂತ್ ಜೊತೆಯಲ್ಲಿಯೂ ಹಲವು ಸಿನಿಮಾಗಳಲ್ಲಿ ಶರತ್ ಬಾಬು ನಟಿಸಿದ್ದಾರೆ.
ಶರತ್ ಬಾಬು 1971ರಲ್ಲಿ ಹಾಸ್ಯ ಕಲಾವಿದೆ ರಮಾ ಪ್ರಭಾ ಜೊತೆ ಶರತ್ ಬಾಬು ಮದುವೆಯಾಗಿದ್ದರು. ರಮಾ ಪ್ರಭಾ ಸಹ ಚಿರಪರಿಚಿತ ಕಲಾವಿದೆಯಾಗಿದ್ದು, ತಮಿಳು, ತೆಲಗು ಸೇರಿದಂತೆ 300ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಮದುವೆಯಾದ 17 ವರ್ಷಕ್ಕೆ ಅಂದ್ರೆ 1988ರಲ್ಲಿ ರಮಾ ಪ್ರಭಾ ಮತ್ತು ಶರತ್ ಬಾಬು ಪರಸ್ಪರ ಸಮ್ಮತಿ ಮೇರೆಗೆ ವಿಚ್ಚೇದನ ಪಡೆದುಕೊಂಡಿದ್ದರು.
ಡಿವೋರ್ಸ್ ಪಡೆದ ಎರಡು ವರ್ಷಕ್ಕೆ 1990ರಲ್ಲಿ ಎಂಎನ್ ನಂಬಿಯಾರ್ ಪುತ್ರಿ ಸ್ನೇಹಲತಾರನ್ನು ಶರತ್ ಬಾಬು ಮದುವೆಯಾದರು. ಆದ್ರೆ ಈ ಸಂಬಂಧವೂ ಡಿವೋರ್ಸ್ನಲ್ಲಿ ಅಂತ್ಯವಾಗಿದೆ. 2011ರಲ್ಲಿ ಶರತ್ ಬಾಬು-ಸ್ನೇಹಲತಾ ವಿಚ್ಚೇದನ ಪಡೆದುಕೊಂಡರು. ಈ ಎರಡೂ ಮದುವೆಯಲ್ಲೂ ಶರತ್ ಬಾಬು ಅವರಿಗೆ ಮಕ್ಕಳಾಗಿರಲಿಲ್ಲ.
ಅಂತಿಮ ಕಾಲದಲ್ಲಿ ಸೆಪ್ಸಿಸ್ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ ಶರತ್ ಬಾಬು ಚಿಕಿತ್ಸೆ ಫಲಕಾಗಿಯಾಗದೆ ಮೃತಪಟ್ಟರು. 2023ರ ಮೇ 22ರಂದು ಶರತ್ ಬಾಬು ಕೊನೆಯುಸಿರೆಳೆದರು. ಕೆಲ ವರದಿಗಳ ಪ್ರಕಾರ, ಶರತ್ ಬಾಬು ಚೆನ್ನೈ, ಬೆಂಗಳೂರು, ಹೈದರಾಬಾದ್ ನಲ್ಲಿ ಕೋಟ್ಯಂತರ ಮೌಲ್ಯದ ಆಸ್ತಿ ಹೊಂದಿದ್ದಾರೆ. ವಿಲಾಸಿ ಮನೆ, ವಿಲ್ಲಾ, ಅಪಾರ್ಟ್ಮೆಂಟ್ ಹಾಗೂ ಹಲವು ಕಂಪನಿಗಳಲ್ಲಿ ಪಾಲುದಾರಿಕೆಯನ್ನು ಶರತ್ ಬಾಬು ಹೊಂದಿದ್ದಾರಂತೆ. ಹಾಗಾಗಿ ಈ ಎಲ್ಲಾ ಆಸ್ತಿ ಯಾರ ಪಾಲಾಗುತ್ತೆ ಎಂಬುದರ ಬಗ್ಗೆ ಪ್ರಶ್ನೆಗಳು ಮೂಡಿವೆ. ಶರತ್ ಬಾಬು ಸೋದರನ ಮಕ್ಕಳನ್ನೇ ತಮ್ಮ ಮಕ್ಕಳಂತೆ ಕಾಣುತ್ತಿದ್ದರು. ಹೀಗಾಗಿ ಎಲ್ಲಾ ಆಸ್ತಿ ಸೋದರರ ಮಕ್ಕಳಿಗೆ ಹಂಚಿಕೆ ಆಗಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಆಸ್ತಿಯ ಕುರಿತು ಶರತ್ ಬಾಬು ಸೋದರ ಪ್ರತಿಕ್ರಿಯೆ ನೀಡಿದ್ದರು. ಶರತ್ ಬಾಬು ನಮ್ಮ ಒಡಹುಟ್ಟಿದವರಲ್ಲಿ ನಾಲ್ಕನೇಯವರು. ತಂದೆಯ ಸ್ಥಾನದಲ್ಲಿ ನಿಂತು ನಮ್ಮೆಲ್ಲರನ್ನು ನೋಡಿಕೊಳ್ಳುತ್ತಿದ್ದರು. ನಾವೆಲ್ಲಾ ಸೋದರರು ಒಗ್ಗಟ್ಟಾಗಿದ್ದು, ಶರತ್ ಬಾಬು ಉಯಿಲು ಬರೆದಿಟ್ಟಿದ್ದರೆ ಯಾವುದೇ ತೊಂದರೆ ಇಲ್ಲ. ಯಾವುದೇ ಉಯಿಲು ಇಲ್ಲವಾದ್ರೆ ಕಾನೂನಿನ ಪ್ರಕಾರ ಕುಟುಂಬದ ಸದಸ್ಯರಿಗೆ ಆಸ್ತಿಯ ಒಡೆತನ ಹಂಚಿಕೆಯಾಗುತ್ತದೆ. ಇದು ನಮ್ಮ ಕುಟುಂಬದ ಆಂತರಿಕ ವಿಚಾರವಾಗಿದ್ದು, ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದಿದ್ದಾರೆ.