ಬಾಲಿವುಡ್ ಚಿತ್ರರಂಗದ ಸೆಲೆಬ್ರಿಟಿ ಜೋಡಿ ಐಶ್ವರ್ಯಾ ರೈ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಸಾಕಷ್ಟು ಸಮಯದಿಂದ ಈ ಜೋಡಿಯ ಮಧ್ಯೆ ಮನಸ್ತಾಪ ಹುಟ್ಟಿಕೊಂಡಿದ್ದು ಸದ್ಯ ದಂಪತಿ ಬೇರೆ ಬೇರೆಯಾಗಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಐಶ್ವರ್ಯಾ ಆಗಲಿ ಬಚ್ಚನ್ ಕುಟುಂಬವಾಗಲಿ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಈ ಮಧ್ಯೆ ಐಶ್ವರ್ಯಾ ರೈ ಅವರ ಮೊದಲ ಮದುವೆಯ ಕುರಿತು ಚರ್ಚೆ ಶುರುವಾಗಿದೆ.
2007 ರಲ್ಲಿ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಅದ್ದೂರಿಯಾಗಿ ಮದುವೆಯಾಗಿದ್ದರು. ಹಲವು ವರ್ಷಗಳ ಕಾಲ ಪ್ರೀತಿಸುತ್ತಿದ್ದ ಜೋಡಿ ಬಳಿಕ ಮನೆಯವರ ಒಪ್ಪಿಗೆ ಪಡೆದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಅಭಿಷೇಕ್ ಅವರನ್ನು ಮದುವೆಯಾಗುವ ಮುನ್ನ ಐಶ್ವರ್ಯಾ ರೈ ಕೆಟ್ಟ ಶಕುನವನ್ನು ನಿವಾರಿಸಲು ಪುರಾತನ ಆಚರಣೆಯ ಅನ್ವಯ ಮರವನ್ನು ವಿವಾಹವಾಗಿದ್ದರು. ಅದು ದೊಡ್ಡ ಮಟ್ಟದಲ್ಲಿ ಸುದ್ದಿ ಕೂಡ ಆಗಿತ್ತು. ಈ ಹಿಂದೆ ಮೊದಲು ಮದುವೆ ಬಗ್ಗೆ ಮಾತನಾಡಿದ್ದ ಐಶ್ವರ್ಯಾ ಅದೊಂದು ಅನಗತ್ಯ ವಿಚಾರವಾಗಿತ್ತು ಎಂದಿದ್ದರು.
ಮರದೊಂದಿಗಿನ ವಿವಾಹದ ಕುರಿತಾದ ವದಂತಿಗಳು ಆ ಸಂದರ್ಭದಲ್ಲಿ ಕಾಡ್ಗಿಚ್ಚಿನಂತೆ ಹರಡಿತ್ತು. ಅಂತಿಮವಾಗಿ ಮದುವೆಯಾದ ಒಂದು ವರ್ಷದ ಬಳಿಕ ನಟಿ ಐಶ್ವರ್ಯಾ ರೈ ಅವರು ಊಹಾಪೋಹಗಳಿಗೆ ಉತ್ತರಿಸಬೇಕಾದ ಪರಿಸ್ಥಿತಿ ಎದುರಾಗಿತ್ತು. ಮಾಧ್ಯಮಗಳು ಈ ವಿಚಾರಕ್ಕೆ ಅನಗತ್ಯವಾಗಿ ಗಮನಹರಿಸಿದ್ದವು. ಮದುವೆಯ ಬಳಿಕ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಲು ಅಮಿತಾಬ್ ಬಚ್ಚನ್ ಅವರೇ ಸುದ್ದಿಗೋಷ್ಟಿ ನಡೆಸಿದ್ದರು.
ನಿಜಕ್ಕೂ ಆ ಸಂದರ್ಭ ತುಂಬಾ ಕಷ್ಟಕರವಾಗಿತ್ತು. ಅದನ್ನು ನಾನು ತೀರಾ ಅನಗತ್ಯ ವಿಚಾರ ಎಂದು ಭಾವಿಸಿದ್ದೆ. ಆದರೆ ಪ್ರೈಮ್ ಟೈಮ್, ನ್ಯೂಸ್ ಪ್ರಿಂಟ್, ಮ್ಯಾಗಜೀನ್ ಕವರ್ ಸ್ಟೋರಿ ಎಲ್ಲದರಲ್ಲೂ ಸುದ್ದಿಯಾಗಿದ್ದು ನನಗೆ ಬೇಸರ ತರಿಸಿತ್ತು. ಈ ನಡುವೆ ನಮ್ಮ ಫ್ಯಾಮಿಲಿ ಇದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ನಾವೆಲ್ಲರೂ ಸಾರ್ವಜನಿಕ ಜೀವನದಲ್ಲಿರುವುದರಿಂದ ಜನರು ನಮ್ಮನ್ನು ನೋಡ್ತಾ ಇರುತ್ತಾರೆ ಎಂಬುದನ್ನು ತಿಳಿದಿದ್ದೇವೆ. ಮದುವೆಯ ಬಳಿಕ ಮಾಧ್ಯಮದವರನ್ನು ಭೇಟಿಯಾದ ಮಾವ ಅಮಿತಾಭ್ ಬಚ್ಚನ್ ಮದುವೆ ಹಾಗೂ ಉಳಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದರು ಎಂದು ಐಶ್ವರ್ಯ ರೈ ಬಚ್ಚನ್ ತಿಳಿಸಿದರು.
ಇದೊಂದು ಶಾಕಿಂಗ್ ನ್ಯೂಸ್, ನನಗೆ ಗೊತ್ತಿಲ್ಲ ಇದು ಎಲ್ಲಿಂದ ಆರಂಭವಾಗಿತ್ತು ಅಂತ. ಆದ್ರೆ ಇದೆಲ್ಲಾ ಸುಳ್ಳು ಸುದ್ದಿ. ನಾನು ಯಾವ ಮರದ ಜೊತೆ ಕೂಡ ಮದುವೆ ಆಗಿರಲಿಲ್ಲ ಎಂದು ಹೇಳಿದ್ರು. ಇದೊಂದು ಆಘಾತಕಾರಿ ಬೆಳವಣಿಗೆಯಾಗಿತ್ತು. ನನಗೆ ಯಾವ ಶಾಪವೂ ಇರಲಿಲ್ಲ, ಯಾವ ಮರದ ಜೊತೆಗೆ ಮದುವೆ ಕೂಡ ಆಗಿರಲಿಲ್ಲ. ಇದೆಲ್ಲಾ ಹೇಗೆ ಪ್ರಾರಂಭವಾಯಿತು ಎಂಬುದೇ ನನಗೆ ತಿಳಿದಿಲ್ಲ ಎಂದು ನಟಿ ಐಶ್ವರ್ಯ ರೈ ಬಚ್ಚನ್ ಪ್ರತಿಕ್ರಿಯಿಸಿದ್ದರು.
ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ ವಿವಾಹವಾಗಿ 17 ವರ್ಷಗಳಾಗಿವೆ. ಈ ದಂಪತಿಗೆ ಆರಾಧ್ಯ ಎಂಬ ಮಗಳು ಕೂಡ ಇದ್ದಾಳೆ. ಇತ್ತೀಚೆಗೆ ಅಭಿಷೇಕ್ ಬಚ್ಚನ್ ವಿಚ್ಛೇದನದ ಕುರಿತ ಪೋಸ್ಟ್ ಒಂದನ್ನು ‘ಲೈಕ್’ ಮಾಡುವ ಮೂಲಕ ಸುದ್ದಿಯಾಗಿದ್ದರು. ಐಶ್ವರ್ಯಾ ಮನೆಯಿಂದ ಹೊರಗಿರುವ ಸಮಯದಲ್ಲಿ ಅಭಿಷೇಕ್ ಬಚ್ಚನ್, ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಲೈಕ್ ಮಾಡುವ ಮೂಲಕ ಜನರ ಗಮನ ಸೆಳೆದಿದ್ದಾರೆ. ಈ ಪೋಸ್ಟ್ ವಿಚ್ಛೇದನದ ತೊಂದರೆಗಳು ಮತ್ತು ಹೆಚ್ಚುತ್ತಿರುವ ‘ಗ್ರೇ ಡೈವೋರ್ಸ್’ ಟ್ರೆಂಡ್ ಕುರಿತದ್ದಾಗಿದೆ. ನಟನ ಈ ಲೈಕ್ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿತ್ತು. ಅಲ್ಲದೆ ಮಗಳೊಂದಿಗೆ ಐಶ್ವರ್ಯಾ ವಿದೇಶಕ್ಕೆ ತೆರಳಿದ್ದು ಈ ವೇಳೆ ಪತಿ ಜೊತೆಗೆ ಇಲ್ಲದಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.