ಚಿಕ್ಕಮಗಳೂರು:- ತಮ್ಮ ಹಗರಣದ ತೂತು ಮುಚ್ಚಲು ಸಿದ್ದರಾಮಯ್ಯ ಬ್ಲ್ಯಾಕ್ ಮೇಲ್ ತಂತ್ರಕ್ಕೆ ಮುಂದಾಗಿದ್ದಾರೆ ಎಂದು ಬಿಜೆಪಿ ಮುಖಂಡ ಸುನಿಲ್ ಕುಮಾರ್ ಹೇಳಿದ್ದಾರೆ.
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಕಾರ್ಕಳ ಪರಶುರಾಮ ಥೀಮ್ ಪಾರ್ಕ್ ಕಾಮಗಾರಿಯಲ್ಲಿ 11 ಕೋಟಿ ರೂ.
ಅವ್ಯವಹಾರ ನಡೆದಿದೆ ಎಂದಿದ್ದಾರೆ. ಸರ್ಕಾರ ಇನ್ನೂ 11 ಕೋಟಿ ರೂ. ಬಿಡುಗಡೆಯೇ ಮಾಡಿಲ್ಲ. ಹಣ ಬಿಡುಗಡೆ ಮಾಡದೇ ಅವ್ಯವಹಾರ ಹೇಗೆ ಆಗುತ್ತೆ ಎಂದು ಶಾಸಕ ಸುನಿಲ್ ಕುಮಾರ್ ಪ್ರಶ್ನಿಸಿದ್ದಾರೆ.
ಹಗರಣ ಪ್ರಕರಣ ಮುಚ್ಚಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬ್ಲ್ಯಾಕ್ ಮೇಲ್ ತಂತ್ರಕ್ಕೆ ಮುಂದಾಗಿದ್ದಾರೆ. ನಾನು ಹಗರಣ ಮಾಡಿದ್ದೇನೆ. ನಿಮ್ಮ ಹಗರಣ ತೆಗಿತೀನಿ ಎನ್ನುವ ವರಸೆಯಲ್ಲಿ ಅವರು ಮಾತನಾಡುತ್ತಿದ್ದು, ಬ್ಲ್ಯಾಕ್ ಮೇಲ್ ತಂತ್ರಕ್ಕೆ ಮುಂದಾಗಿರುವುದು ಆಶ್ಚರ್ಯ ಮತ್ತು ಹಾಸ್ಯಾಸ್ಪದವಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.
ವಾಲ್ಮೀಕಿ, ಮೂಡಾ ಹಗರಣ ಬರುವ ತನಕ ಬಿಜೆಪಿ ಹಗರಣ ನಿಮಗೆ ಗೊತ್ತಿರಲಿಲ್ವಾ? ನಿಮ್ಮದೇ ಸರ್ಕಾರ ಇರುವಾಗ ಇಲ್ಲಿಯವರೆಗೂ ಯಾಕೆ ತನಿಖೆ ಮಾಡಲಿಲ್ಲ? ನಿಮ್ಮ ಕಾಲಬುಡಕ್ಕೆ ಬಂದಾಗ ಬಿಜೆಪಿ ಬಗ್ಗೆ ಹೇಳುತ್ತಿದ್ದೀರಿ. ಸಿಎಂ ಸದನದ ಒಳಗೆ ಎಷ್ಟೊಂದು ಸುಳ್ಳು ಹೇಳಿದ್ದಾರೆ. ಸದನದ ಒಳಗೆ ಇಷ್ಟು ಸುಳ್ಳು ಹೇಳುವ ಮುಖ್ಯಮಂತ್ರಿಯನ್ನು ಎಂದು ಕಂಡಿಲ್ಲ. ಅವ್ಯವಹಾರ ಆಗಿದ್ದರೆ ಯಾವ ತನಿಖೆಯನ್ನು ಬೇಕಾದರೂ ಮಾಡಲಿ. ಸಿಬಿಐ, ಇಂಟರ್ ಪೋಲ್, ಸಿಐಡಿ ಯಾವುದೇ ತನಿಖೆ ಬೇಕಾದರೂ ಮಾಡಿ ಎಂದು ಅವರು ಸವಾಲು ಹಾಕಿದ್ದಾರೆ.