ನವದೆಹಲಿ: ಎನ್ಸಿಪಿ ನಾಯಕ ಶರದ್ ಪವಾರ್ ಕಡು ಭ್ರಷ್ಟ ಎಂದು ಜರಿದಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, “ಮಾಜಿ ಸಿಎಂ ಉದ್ಧವ್ ಠಾಕ್ರೆ ಅವರನ್ನು ‘ಔರಂಗಜೇಬ ಅಭಿಮಾನಿಗಳ ಸಂಘದ ಮುಖ್ಯಸ್ಥ’,” ಎಂದು ಲೇವಡಿ ಮಾಡಿದ್ದಾರೆ. ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆಗೆ ಮೂರು ತಿಂಗಳಿರುವಾಗಲೇ ಬಿಜೆಪಿ ನೇತೃತ್ವದ ಮಹಾಯುತಿ, ಕಾಂಗ್ರೆಸ್ ನೇತೃತ್ವದ ಮಹಾ ವಿಕಾಸ್ ಆಘಾಡಿ ನಡುವೆ ವಾಕ್ಸಮರ ತಾರಕಕ್ಕೇರಿದೆ.
ಪುಣೆಯಲ್ಲಿ ಬಿಜೆಪಿ ಪದಾಧಿಕಾರಿಗಳ ಸಮಾವೇಶ ಉದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, “ಶರದ್ ಪವಾರ್ ಅವರು ಭಾರತದ ಭ್ರಷ್ಟರ ಮುಖ್ಯಸ್ಥ. ಭ್ರಷ್ಟಾಚಾರದ ಪಿತಾಮಹ ಇದ್ದಂತೆ. ದೇಶದಲ್ಲಿ ಭ್ರಷ್ಟಾಚಾರವನ್ನು ಹರಡಿದ ಮಹಾನ್ ನಾಯಕ,” ಎಂದು ವ್ಯಂಗ್ಯವಾಡಿದರು.
ಒಂದು ಕಾಲದ ಬಿಜೆಪಿ ಸ್ನೇಹಿತ ಉದ್ಧವ್ ಠಾಕ್ರೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅಮಿತ್ ಶಾ ಅವರು, “ಹಿಂದೂ ಹುಲಿ ಎಂದೇ ಖ್ಯಾತರಾಗಿದ್ದ ಬಾಳಾ ಸಾಹೇಬ್ ಠಾಕ್ರೆ ಮಗ ಇಂದು ಮೊಘಲ್ ದೊರೆ ‘ಔರಂಗಜೇಬ ಅಭಿಮಾನಿಗಳ ಸಂಘದ ನಾಯಕ’ನಾಗಿ ಬದಲಾಗಿದ್ದಾರೆ,” ಎಂದು ಲೇವಡಿ ಮಾಡಿದರು.1993ರ ಮುಂಬಯಿ ಸರಣಿ ಬಾಂಬ್ ಸ್ಫೋಟದ ಅಪರಾಧಿ ಯಾಕೂಬ್ ಮೆಮನ್ಗೆ ಕ್ಷಮಾದಾನ ನೀಡುವಂತೆ ಒತ್ತಾಯಿಸಿದವರ ಜತೆಯಲ್ಲಿ ಉದ್ಧವ್ ಠಾಕ್ರೆ ಕುಳಿತಿದ್ದರು ಎಂದು ಕಿಡಿಕಾರಿದರು.