ಅಮೆರಿಕ ಅಧ್ಯಕ್ಷ ಜೋ ಬೈಡನ್ ಅಧ್ಯಕ್ಷೀಯ ಕಣದಿಂದ ಹಿಂದೆ ಸರಿದಿದ್ದಾರೆ. ಈ ಬೆನ್ನಲ್ಲೇ ಡೆಮಾಕ್ರಟಿಕ್ ಪಕ್ಷಕ್ಕೆ ದೇಣಿಗೆಯ ಹೊಳೆಯೇ ಹರಿದು ಬಂದಿದ್ದು, ಭಾನುವಾರ ಒಂದೇ ದಿನ $50 ಮಿಲಿಯನ್ (₹418.30 ಕೋಟಿ) ದೇಣಿಗೆ ಲಭಿಸಿದೆ. ಇದು 2020ರ ಚುನಾವಣೆ ಬಳಿಕ ಒಂದೇ ದಿನ ಸಿಕ್ಕಿದ ಅತಿ ದೊಡ್ಡ ಪ್ರಮಾಣದ ದೇಣಿಗೆ ಮೊತ್ತವಾಗಿದೆ.
ಡೆಮಾಕ್ರಟಿಕ್ ಪಕ್ಷದ ಆನ್ಲೈನ್ ದೇಣಿಗೆಯನ್ನು ಪರಿಶೀಲಿಸುವ ActBlueನ ದತ್ತಾಂಶದ ಮಾಹಿತಿಯನ್ನು ಆಧರಿಸಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಬೈಡನ್ ಹಿಂದೆ ಸರಿದು, ಕಮಲಾ ಹ್ಯಾರಿಸ್ ಮುಂದಿನ ಅಭ್ಯರ್ಥಿ ಎಂದು ಘೋಷಣೆಯಾದ ಬೆನ್ನಲ್ಲೇ, ಆನ್ಲೈನ್ ದೇಣಿಗೆ ಪ್ರಮಾಣ ಏರಿಕೆಯಾಗಿದೆ.
ಬೈಡನ್ ಅವರು ಹಿಂದೆ ಸರಿಯುವುದಕ್ಕೂ ಮುನ್ನ ಗಂಟೆಗೆ ಸರಾಸರಿ $ 200,000 (₹16.73 ಕೋಟಿ) ದೇಣಿಗೆ ಸಂಗ್ರಹವಾಗುತ್ತಿದ್ದರೆ, ಅವರು ಹಿಂದೆ ಸರಿದ ಬಳಿಕ ಅದು $11.5 ಮಿಲಿಯನ್ಗೆ (₹ 96.20ಕೋಟಿ) ಏರಿಕೆಯಾಗಿದೆ.
‘ಪಕ್ಷದ ಇತಿಹಾಸದಲ್ಲಿ ಇದು ಅತ್ಯಂತ ದೊಡ್ಡ ನಿಧಿ ಸಂಗ್ರಹದ ಕ್ಷಣವಾಗಿರಬಹುದು’ ಎಂದು ಡೆಮಾಕ್ರಟಿಕ್ ಪಕ್ಷದ ಡಿಜಿಟಲ್ ಸ್ಟಾಟರ್ಜಿಸ್ಟ್ ಕೆನೆತ್ ಪೆನ್ನಿಂಗ್ಟನ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಹಿಂದೆ 2020ರ ಸೆಪ್ಟಂಬರ್ನಲ್ಲಿ ಒಂದೇ ದಿನ $73.5 ಮಿಲಿಯನ್ (₹614.86 ಕೋಟಿ) ಸಂಗ್ರಹವಾಗಿತ್ತು.