ಇಂದಿನಿಂದ ಸಂಸತ್ತಿನ ಬಜೆಟ್ ಅಧಿವೇಶನವು ಆರಂಭವಾಗಲಿದ್ದು, ಇಂದಿನಿಂದ ಆರಂಭವಾಗುವ ಬಜೆಟ್ ಅಧಿವೇಶನವು ಆಗಸ್ಟ್ 12ರವರೆಗೆ ನಡೆಯಲಿದೆ. ಜುಲೈ 23ರಂದು ಬಜೆಟ್ ಮಂಡಿಸಲಾಗುತ್ತದೆ. ಎನ್ಡಿಎ ಸರ್ಕಾರದ ಮೂರನೇ ಅವಧಿಯ ಮೊದಲ ಬಜೆಟ್ ಮಂಡಿಸಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಜ್ಜಾಗಿದ್ದಾರೆ.
ಅಧಿವೇಶನದಲ್ಲಿ 16 ಕಲಾಪಗಳು ನಡೆಯಲಿವೆ. ಸೋಮವಾರವೇ ಆರ್ಥಿಕ ಸಮೀಕ್ಷೆ ಪ್ರಕಟಿಸಲಾಗುತ್ತದೆ. ಅಧಿವೇಶನದ ವೇಳೆ ಕೇಂದ್ರ ಸರ್ಕಾರವು ವಿಪತ್ತು ನಿರ್ವಹಣಾ (ತಿದ್ದುಪಡಿ) ವಿಧೇಯಕ, ಭಾರತೀಯ ವಾಯುಯಾನ ವಿಧೇಯಕ ಸೇರಿ ಒಟ್ಟು ಆರು ವಿಧೇಯಕಗಳನ್ನು ಮಂಡಿಸಲಿದೆ ಎಂದು ತಿಳಿದುಬಂದಿದೆ.
ನಿರ್ಮಲಾ ಸೀತಾರಾಮನ್ ಅವರು ಇಂದು ಪೂರ್ಣಪ್ರಮಾಣದ ಬಜೆಟ್ ಮಂಡಿಸುವ ಮೂಲಕ ಹೊಸ ದಾಖಲೆ ಬರೆಯಲಿದ್ದಾರೆ. ಇದುವರೆಗೆ ನಿರ್ಮಲಾ ಸೀತಾರಾಮನ್ ಅವರು ಹಣಕಾಸು ಸಚಿವೆಯಾಗಿ ಐದು ಪೂರ್ಣ ಪ್ರಮಾಣದ ಹಾಗೂ ಒಂದು ಮಧ್ಯಂತರ ಬಜೆಟ್ ಮಂಡಿಸಿದ್ದಾರೆ. ಈಗ ಏಳನೇ ಬಾರಿಗೆ ಬಜೆಟ್ ಮಂಡಿಸಿದರೆ, ದೇಶದ ಇತಿಹಾಸದಲ್ಲಿಯೇ ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ ಖ್ಯಾತಿಗೆ ಭಾಜನರಾಗಲಿದ್ದಾರೆ. ಮೊರಾರ್ಜಿ ದೇಸಾಯಿ ಅವರು ಆರು ಬಾರಿ ಬಜೆಟ್ ಮಂಡಿಸಿದ ದಾಖಲೆ ಮಾಡಿದ್ದಾರೆ. ಇದನ್ನು ನಿರ್ಮಲಾ ಸೀತಾರಾಮನ್ ಅವರು ಮುರಿಯಲಿದ್ದಾರೆ.
ಸಾಲು ಸಾಲು ವಿಷಯಗಳನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಇಂಡಿಯಾ ಒಕ್ಕೂಟವು ಸಜ್ಜಾಗಿದೆ. ಅದರಲ್ಲೂ, ಮಣಿಪುರ ಹಿಂಸಾಚಾರ, ನೀಟ್ ಪ್ರಶ್ನೆಪತ್ರಿಕೆ ಪ್ರಕರಣ, ಬೆಲೆಏರಿಕೆ, ಯುಪಿಎಸ್ಸಿ ಅಕ್ರಮ ಸೇರಿ ಹಲವು ವಿಷಯಗಳನ್ನು ಪ್ರತಿಪಕ್ಷಗಳು ಚರ್ಚೆಗೆ ತರಲಿವೆ. ಸರ್ಕಾರಕ್ಕೆ ಚಾಟಿ ಬೀಸಲು ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರೂ ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ