ಬಾಂಗ್ಲಾದೇಶದಲ್ಲಿ ಕಳೆದ ಕೆಲ ದಿನಗಳಿಂದ ಉಂಟಾಗಿರುವ ಪ್ರತಿಭಟನೆಯನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ಶೇ. 56ರಷ್ಟಿದ್ದ ಒಟ್ಟಾರೆ ಮೀಸಲಾತಿ ಪ್ರಮಾಣವನ್ನು ಶೇ. 7ಕ್ಕೆ ಇಳಿಸಿದೆ. ಆದರೆ ಪ್ರತಿಭಟನೆಗೆ ಕಾರಣವಾಗಿದ್ದ ಸ್ವಾತಂತ್ರ್ಯ ಯೋಧರ ಕುಟುಂಬದ ಮೀಸಲಾತಿಯನ್ನು ಕೋರ್ಟ್ ಕೈಬಿಟ್ಟಿಲ್ಲ. ಆದರೆ, ಅವರ ಮೀಸಲಾತಿ ಮುಂದುವರಿದಿದೆಯಾದರೂ ಪ್ರಮಾಣ ಮಾತ್ರ ತುಸು ತಗ್ಗಿದೆ. ಶೇ. 30ರಷ್ಟಿದ್ದ ಮೀಸಲಾತಿಯನ್ನು ಶೇ. 5ಕ್ಕೆ ಸೀಮಿತಗೊಳಿಸಿ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ.
ತೀರ್ಪು ಪ್ರಕಟಿಸಿದ ಬಾಂಗ್ಲಾದೇಶದ ಸರ್ವೋಚ್ಚ ನ್ಯಾಯಾಲಯ, ಪ್ರತಿಭಟನೆಗಳನ್ನು ಕೈಬಿಟ್ಟು ತರಗತಿಗಳಿಗೆ ಮರಳುವಂತೆ ವಿದ್ಯಾರ್ಥಿಗಳಿಗೆ ಆದೇಶಿಸಿದೆ. ಆದರೆ, ಸ್ವಾತಂತ್ರ್ಯ ಯೋಧರ ಬಂಧುಗಳಿಗೆ ಮೀಸಲಾತಿ ಕೊಡುತ್ತಿರುವುದರ ವಿರುದ್ಧವೇ ನಡೆಯುತ್ತಿರುವ ಪ್ರತಿಭಟನೆ ಈಗ ಕೋರ್ಟ್ ಆದೇಶದಿಂದ ನಿಲ್ಲುತ್ತದಾ ಕಾದುನೋಡಬೇಕು. ಇದುವರೆಗೂ ಪ್ರತಿಭಟನೆಯಲ್ಲಿ 151 ಮಂದಿ ಮೃತಪಟ್ಟಿದ್ದಾರೆ. ಪ್ರಧಾನಿ ಶೇಖರ್ ಹಸೀನಾ ಅವರು ತಮ್ಮ ವಿದೇಶೀ ಪ್ರವಾಸವನ್ನು ರದ್ದುಗೊಳಿಸಬೇಕಾಯಿತು.
ಬಾಂಗ್ಲಾದೇಶದಲ್ಲಿ ಒಟ್ಟಾರೆ ಮೀಸಲಾತಿ ಶೇ. 56ರಷ್ಟಿದೆ. ಇದರಲ್ಲಿ 1971ರ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದವರ ಕುಟುಂಬ ಸದಸ್ಯರು ಮತ್ತು ಬಂಧುಗಳಿಗೆ ಸರ್ಕಾರಿ ಉದ್ಯೋಗಗಳಲ್ಲಿ ಶೇ. 30ರಷ್ಟು ಮೀಸಲಾತಿ ಕೊಡುವ ಹೊಸ ನೀತಿಯನ್ನು ಸರ್ಕಾರ ಜಾರಿಗೆ ತಂದಿತು. ಇದು ವಿದ್ಯಾರ್ಥಿ ವಲಯದಲ್ಲಿ ಬೃಹತ್ ಪ್ರತಿಭಟನೆಗೆ ಎಡೆ ಮಾಡಿಕೊಟ್ಟಿದೆ. ನಿರುದ್ಯೋಗ ಹೆಚ್ಚಿರುವಾಗ ಇಷ್ಟು ಮೀಸಲಾತಿ ಕೊಡುವುದು ಎಷ್ಟು ಸರಿ ಎಂಬುದು ಪ್ರತಿಭಟನಾಕಾರರ ಆಕ್ಷೇಪ.