ಬೆಂಗಳೂರು: ಮುಂಗಾರು ಚುರುಕಾದ ಬೆನ್ನಲ್ಲೇ ಬೆಂಗಳೂರಲ್ಲಿ ತರಕಾರಿ ದರಗಳು ಏರಿಕೆಯಾಗುತ್ತಿದೆ. ನಿರಂತರ ಮಳೆಯಿಂದಾಗಿ ತರಕಾರಿ ಬೆಲೆ ಹೆಚ್ಚಳಗೊಂಡಿದೆ. ಟೊಮ್ಯಾಟೊ ಶತಕದ ಸನಿಹ ತಲುಪಿದ್ರೆ, ಇತರೆ ತರಕಾರಿ ಬೆಲೆಗಳೂ ಗಗನಕ್ಕೇರಿದೆ.
ಮಳೆಯಿಂದಾಗಿ ಆಮದು ಕಡಿಮೆ, ಗ್ರಾಹಕರ ಕೈ ಸುಟ್ಟ ದರ
ಅನ್ನಕ್ಕೆ ತರಕಾರಿ ಎಲ್ಲಾ ಹಾಕಿ ಒಳ್ಳೆ ತರಕಾರಿ ಸಾಂಬಾರು ಮಾಡೋಣ ಅಂದುಕೊಂಡವರು ತಮ್ಮ ಪ್ಲಾನ್ ಚೇಂಜ್ ಮಾಡಿಕೊಳ್ಳೊದು ಉತ್ತಮ. ಯಾಕಂದ್ರೆ ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಜಾಸ್ತಿ ಆಗಿದೆ. ನಿರಂತರ ಮಳೆಯ ಕಾರಣ ತರಕಾರಿ ಬೆಲೆ ಹೆಚ್ಚಳಗೊಂಡಿದೆ. ರಾಜ್ಯದ ಉದ್ದಗಲಕ್ಕೂ ಅಬ್ಬರಿಸುತ್ತಿರುವ ಮುಂಗಾರು ಮಳೆಗೆ ಇಳುವರಿ ಕಡಿಮೆಯಾಗಿದೆ ಇದರ ಜೊತೆಗೆ ಆಮದು ಕೂಡ ಕುಗ್ಗಿದ್ದು, ದುಬಾರಿ ದುನಿಯಾದಲ್ಲಿ ಶ್ರೀ ಸಾಮಾನ್ಯರ ಬದುಕು ಕಷ್ಟವಾಗಿದೆ.
ತರಕಾರಿ ಬೆಲೆ ಹೆಚ್ಚಳ ಜನರಿಗೆ ಬಿಸಿ ಮುಟ್ಟಿಸಿದೆ. ಅದರಲ್ಲೂ ಪ್ರತಿ ಅಡುಗೆಗೆ ಬೇಕಿರುವ ಟೊಮ್ಯಾಟೊ ಬೆಲೆ ಜಾಸ್ತಿ ಆಗಿದೆ. ಒಳ್ಳೆ ಕ್ವಾಲಿಟಿ ಟೊಮ್ಯಾಟೊ ಬೆಲೆ 100 ರಿಂದ 130 ರೂಪಾಯಿವರೆಗೆ ದರ ನಗರದ ಪ್ರಮುಖ ಮಾರುಕಟ್ಟೆಗಳಲ್ಲೇ ನಡೆಯುತ್ತಿದೆ. ಇದರ ಜೊತೆಗೆ ಇತರೆ ತರಕಾರಿಗಳ ಬೆಲೆಯೂ ಗ್ರಾಹಕರ ಜೇಬು ಸುಡುತ್ತಿದೆ. ತರಕಾರಿ ಬೆಲೆಗಳೇ ಈ ರೀತಿ ಏರಿಕೆಯಾದರೆ ಜನರು ಏನು ತಿನ್ನಬೇಕು? ಸರ್ಕಾರದ ದರ ಗಳ ಮೇಲೆ ಹಿಡಿತ ಸಾಧಿಸಿಕೊಳ್ಳಬೇಕು ಇಲ್ಲಿದಿದ್ದರೆ ಬದುಕು ಮತ್ತಷ್ಟು ಕಷ್ಟ ಆಗಲಿದೆ ಎನ್ನುತ್ತಿದ್ದಾರೆ ಗ್ರಾಹಕರು.
ರಾಜ್ಯದಲ್ಲಿ ಟೊಮ್ಯಾಟೋ ಉತ್ಪಾದನೆ ಕುಸಿತ ಕಂಡ ಹಿನ್ನೆಲೆ ಬೆಲೆ ಏರಿಕೆಯಾಗಿದೆಯಂತೆ. ಮಂಡ್ಯ, ಕೋಲಾರ, ಕನಕಪುರ, ಕಡೂರು, ಮದ್ದೂರು ಕಡೆಗಳಲ್ಲಿ ಟೊಮ್ಯಾಟೋ ಇಳುವರಿ ಕುಸಿತವಾಗಿದೆ. ಸದ್ಯ ಮಹಾರಾಷ್ಟ್ರದಿಂದ ಆಮದಾಗುವ ಟೊಮ್ಯಾಟೋ ನೆಚ್ಚಿಕೊಂಡಿದೆ ಬೆಂಗಳೂರಿನ ಮಾರುಕಟ್ಟೆಗಳು. ಟೊಮ್ಯಾಟೋ ಜೊತೆಗೆ ಬೀನ್ಸ್, ಬೆಳ್ಳುಳ್ಳಿ ಸೇರಿದಂತೆ ಇತರೆ ತರಕಾರಿ ದರವೂ ತುಟ್ಟಿಯಾಗಿದೆ. ಮುಂದಿನ ಕೆಲ ದಿನಗಳ ತರಕಾರಿ ದರ ಹೀಗೆಯೇ ಇರುವ ಸಾಧ್ಯತೆ ಇದೆ.
ಬೀನ್ಸ್ : ₹100 – ₹140
ಬಿಳಿ ಬದನೆ : ₹100
ಕ್ಯಾರೆಟ್ : ₹100 – ₹120
ಬಜ್ಜಿ ಮೆಣಸಿನಕಾಯಿ : ₹80 – ₹100
ಕ್ಯಾಪ್ಸಿಕಂ : ₹100 – ₹120
ಬೆಂಡೆಕಾಯಿ : ₹50 – ₹80
ಮೂಲಂಗಿ : ₹60 – ₹90
ನುಗ್ಗೆಕಾಯಿ : ₹175 – ₹190
ಶುಂಠಿ : ₹190 – ₹260
ಬೆಳ್ಳುಳ್ಳಿ : ₹290 – ₹360
ಹೀರೇಕಾಯಿ : ₹90 – ₹120