ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಬುಡಕಟ್ಟು ಜಿಲ್ಲೆಯ ಸರ್ಕಾರಿ ಬಾಲಕಿಯರ ಶಾಲೆಯನ್ನು ಅಪರಿಚಿತ ಉಗ್ರರು ಸ್ಫೋಟಿಸಿದ್ದು ಯಾವುದೇ ಪ್ರಾಣಹಾಸಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಫ್ಘಾನಿಸ್ತಾನದ ಗಡಿಯಲ್ಲಿರುವ ಉತ್ತರ ವಜಿರಿಸ್ತಾನ್ ಬುಡಕಟ್ಟು ಜಿಲ್ಲೆಯ ಸರ್ಕಾರಿ ಬಾಲಕಿಯರ ಮಾಧ್ಯಮಿಕ ಶಾಲೆಯನ್ನ ಭಾನುವಾರ ಮತ್ತು ಸೋಮವಾರ ಮಧ್ಯರಾತ್ರಿ ಉಗ್ರರು ಸ್ಫೋಟಿಸಿದ್ದಾರೆ ಎಂದು ಖೈಬರ್ ಪಖ್ತುನ್ಖ್ವಾ ಶಿಕ್ಷಣ ಸಚಿವ ಫೈಸಲ್ ಖಾನ್ ತಾರಕೈ ತಿಳಿಸಿದ್ದಾರೆ.
ಸ್ಫೋಟದಲ್ಲಿ ಶಾಲೆಯ ಏಳು ಕೊಠಡಿಗಳು ನೆಲಸಮವಾಗಿವೆ. ಒಟ್ಟು 255 ಬಾಲಕಿಯರು ಶಾಲೆಗೆ ದಾಖಲಾಗಿದ್ದರು. ಶಾಲೆಯನ್ನ ಶೀಘ್ರದಲ್ಲೇ ಕಾರ್ಯರೂಪಕ್ಕೆ ತರಲಾಗುವುದು ಎಂದು ತಾರಕೈ ಹೇಳಿದರು. “ಇಂತಹ ಹೇಡಿತನದ ಕೃತ್ಯಗಳು ಬುಡಕಟ್ಟು ಪ್ರದೇಶಗಳಲ್ಲಿ ಶಿಕ್ಷಣ ಉತ್ತೇಜನದ ನಮ್ಮ ಸಂಕಲ್ಪವನ್ನ ತಡೆಯಲು ಸಾಧ್ಯವಿಲ್ಲ. ಶಿಕ್ಷಣವನ್ನ ಒದಗಿಸುವುದು ಖೈಬರ್ ಪಖ್ತುನ್ಖ್ವಾ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ” ಎಂದು ಅವರು ಹೇಳಿದರು.
ತಾಲಿಬಾನ್ ಮತ್ತು ಅದರ ಘಟಕ ಸಂಸ್ಥೆಗಳು ಮಹಿಳಾ ಶಿಕ್ಷಣವನ್ನ ವಿರೋಧಿಸುತ್ತಿವೆ ಮತ್ತು ಅದನ್ನ ಇಸ್ಲಾಮಿಕ್ ವಿರೋಧಿ ಎಂದು ಪರಿಗಣಿಸಿವೆ. ಮೇ ತಿಂಗಳಲ್ಲಿ ಇದೇ ರೀತಿಯ ಘಟನೆಯಲ್ಲಿ, ಉತ್ತರ ವಜಿರಿಸ್ತಾನ್ ಜಿಲ್ಲೆಯ ತಹಸಿಲ್ ಶೆವಾದಲ್ಲಿ ಖಾಸಗಿ ಬಾಲಕಿಯರ ಶಾಲೆಯನ್ನ ಅಪರಿಚಿತ ಭಯೋತ್ಪಾದಕರು ಸ್ಫೋಟಗೊಳಿಸಿದ್ದರು.