ಅಮೆರಿಕದ ಅಧ್ಯಕ್ಷೀಯ ಚುನಾವಣಾ ಪ್ರಚಾರದ ವೇಳೆ ಮಾಜಿ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರ ಹತ್ಯೆಗೆ ಯತ್ನಿಸಲಾಗಿದೆ. ಸದ್ಯ ಘಟನೆಯಿಂದ ಚೇತರಿಸಿಕೊಂಡಿರುವ ಟ್ರಂಪ್ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಈ ಪ್ರಕರಣವನ್ನು ಪರಾಮರ್ಶಿಸಲು ಸ್ವತಂತ್ರ ತಜ್ಞರ ತಂಡವೊಂದನ್ನು ಅಮೆರಿಕದ ಆಂತರಿಕ ಭದ್ರತಾ ಕಾರ್ಯದರ್ಶಿ ಹಲೆಹ್ಯಾಂಡ್ರೊ ಮಯೋರ್ಕಸ್ ಅವರು ನೇಮಿಸಿದ್ದಾರೆ.
‘ಪೆನ್ಸಿಲ್ವೇನಿಯಾದಲ್ಲಿ ಟ್ರಂಪ್ ಅವರ ಪ್ರಚಾರ ಕಾರ್ಯಕ್ರಮ ಆಯೋಜನೆಗೊಳ್ಳುವ ಹಂತದಲ್ಲಿ, ಕಾರ್ಯಕ್ರಮ ನಡೆಯುತ್ತಿದ್ದಾಗ ಹಾಗೂ ಹತ್ಯೆ ಯತ್ನ ನಡೆದ ಬಳಿಕ, ಸೀಕ್ರೆಟ್ ಸರ್ವಿಸ್ ಸೇರಿದಂತೆ ರಾಜ್ಯ ಹಾಗೂ ಸ್ಥಳೀಯ ಆಡಳಿತವು ಯಾವೆಲ್ಲಾ ಕ್ರಮಗಳನ್ನು ತೆಗೆದುಕೊಂಡಿದ್ದವು ಎನ್ನುವ ಕುರಿತು ಈ ತಂಡವು ಪರಾಮರ್ಶೆ ನಡೆಸಲಿದೆ.
45 ದಿನಗಳ ಒಳಗಾಗಿ ವರದಿಯನ್ನು ಈ ತಂಡ ನೀಡಬೇಕಿದೆ’ ಎಂದು ಆಂತರಿಕ ಭದ್ರತಾ ಕಾರ್ಯದರ್ಶಿ ಹೇಳಿದ್ದಾರೆ.
‘ಅಮೆರಿಕದ ಸೀಕ್ರೆಟ್ ಸರ್ವಿಸ್ನ ಭದ್ರತಾ ನೀತಿಗಳು, ಕಾರ್ಯವಿಧಾನಗಳ ಕುರಿತೂ ಈ ತಜ್ಞರ ತಂಡವು ಪರಾಮರ್ಶೆ ನಡೆಸಲಿದೆ. ತನಿಖೆ ಹಂತದಲ್ಲಿ ಇನ್ನಷ್ಟು ಮಾಹಿತಿಯ ಅಗತ್ಯವಿದ್ದಲ್ಲಿ, ಮುಂದಿನ ದಿನಗಳಲ್ಲಿ ಮತ್ತಷ್ಟು ತಜ್ಞರು ಈ ತಂಡವನ್ನು ಸೇರಿಕೊಳ್ಳಲಿದ್ದಾರೆ’ ಎಂದೂ ಅವರು ವಿವರಿಸಿದ್ದಾರೆ.
‘ಸಿಕ್ರೇಟ್ ಸರ್ವೀಸ್ ತನ್ನ ಕಾರ್ಯವಿಧಾನದಲ್ಲಿ ಏನೆಲ್ಲಾ ಬದಲಾವಣೆಗಳನ್ನು ಮಾಡಿಕೊಳ್ಳಬಹುದು. ಆ ಮೂಲಕ ತನ್ನ ಕಾರ್ಯಕ್ಷಮತೆಯನ್ನು ಹೇಗೆ ಹೆಚ್ಚಿಸಿಕೊಳ್ಳಬಹುದು ಎಂಬುದರ ಕುರಿತು ವರದಿ ನೀಡಲಿದ್ದೇವೆ. ಟ್ರಂಪ್ ಹತ್ಯೆ ಯತ್ನದಂಥ ಪ್ರಮಾದ ಮತ್ತೊಮ್ಮೆ ಘಟಿಸದಂತೆ ನಾವೆಲ್ಲರೂ ಒಗ್ಗೂಡಿ ಕೆಲಸ ಮಾಡಬೇಕಿದೆ’ ಎಂದು ಸ್ವತಂತ್ರ ತಜ್ಞರ ತಂಡದ ಸದಸ್ಯರೊಬ್ಬರು ಹೇಳಿದ್ದಾರೆ.
ತಜ್ಞರ ತಂಡ ರಚಿಸಿರುವುದನ್ನು ಸ್ವಾಗತಿಸುತ್ತೇನೆ. ಈ ರೀತಿಯ ಘಟನೆಯು ಇನ್ನೆಂದೂ ನಡೆಯದಂತೆ ತಂಡವು ಯಾವೆಲ್ಲಾ ಶಿಫಾರಸುಗಳನ್ನು ನೀಡುತ್ತದೆ ಎಂಬುದನ್ನು ತಿಳಿಯಲು ಉತ್ಸುಕಳಾಗಿದ್ದೇನೆ ಎಂದು ಸಿಕ್ರೇಟ್ ಸರ್ವೀಸ್ ನಿರ್ದೇಶಕಿ ಕಿಮ್ ಚೆಟಲ್ ಹೇಳಿದ್ದಾರೆ.