ಹುಬ್ಬಳ್ಳಿ: ‘ಈಶ್ವರ ನಗರದ ದಕ್ಷಿಣ ವೈಷ್ಣೋದೇವಿ ಮಂದಿರದ ಅರ್ಚಕ ದೇವಪ್ಪಜ್ಜ ಅವರ ಕೊಲೆ ಪ್ರಕರಣದ ಆರೋಪಿ ಬಂಧನಕ್ಕೆ ಡಿಸಿಪಿ ಮತ್ತು ಎಸಿಪಿ ನೇತೃತ್ವದಲ್ಲಿ ಎಂಟು ತಂಡಗಳನ್ನು ರಚಿಸಲಾಗಿದೆ’ ಎಂದು ಕಮಿಷನರ್ ಎನ್. ಶಶಿಕುಮಾರ್ ಹೇಳಿದರು.
ಈ ಕುರಿತು ಮಾತನಾಡಿದ ಅವರು, ‘ದೇವಪ್ಪಜ್ಜ ಅವರ ಕೊಲೆಗೆ ಕಾರಣ ತಿಳಿದು ಬಂದಿಲ್ಲ. ಮಾಟ, ಮಂತ್ರ ಹಿನ್ನೆಲೆಯಲ್ಲಿ ಕೊಲೆ ನಡೆದಿರುವ ಬಗ್ಗೆ ತಿಳಿದುಬಂದಿಲ್ಲ. ಕೃತ್ಯ ನಡೆದ ಸ್ಥಳದಲ್ಲಿನ ಸಿ.ಸಿ ಟಿ.ವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಲಾಗಿದೆ’ ಎಂದರು. ದೇವಪ್ಪಜ್ಜ ಅವರ ಕಾರ್ಯಚಟುವಟಿಕೆಗಳ ಕುರಿತು, ಒಡನಾಟದಲ್ಲಿರುವ ವ್ಯಕ್ತಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ. ಕುಟುಂಬದ ಸದಸ್ಯರಿಂದಲೂ ಮಾಹಿತಿ ಪಡೆಯಲಾಗಿದೆ. ಅವರ ಜತೆ ನಿಕಟ ಸಂಪರ್ಕದಲ್ಲಿ ಯಾರಿದ್ದರು ಹಾಗೂ ಅವರ ಮೊಬೈಲ್ ನಂಬರ್ಗೆ ಬಂದ ಕರೆಗಳ ಮಾಹಿತಿ ಆಧರಿಸಿಯೂ ತನಿಖೆ ನಡೆಸಲಾಗುತ್ತಿದೆ.
ಮರಣೋತ್ತರ ಪರೀಕ್ಷೆ: ಭಾನುವಾರ ರಾತ್ರಿ ಕೊಲೆಯಾಗಿದ್ದ ದೇವಪ್ಪಜ್ಜ ಅವರ ಮರಣೋತ್ತರ ಪರೀಕ್ಷೆಯನ್ನು ಕಿಮ್ಸ್ ಶವಾಗಾರದಲ್ಲಿ ಸೋಮವಾರ ನಡೆಸಲಾಯಿತು. ಬೆನ್ನಿಗೆ ಹಾಗೂ ಹೊಟ್ಟೆ ಭಾಗಕ್ಕೆ ತಲಾ ಎರಡು ಕಡೆ ಚಾಕು ಇರಿದ ಗುರುತು ಇದ್ದು, ಕರುಳು ಹಾಗೂ ಬೆನ್ನಿಗೆ ಆಳವಾದ ಗಾಯವಾಗಿ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ದೇವಪ್ಪಜ್ಜ ಅವರನ್ನು ಕೊಲೆ ಮಾಡಿರುವ ಸ್ಥಳದಲ್ಲಿದ್ದ ಸಿ.ಸಿ ಟಿ.ವಿ ಕ್ಯಾಮೆರಾದ ದೃಶ್ಯಾವಳಿಯನ್ನು ನವನಗರ ಠಾಣೆ ಪೊಲೀಸರು ಪರಿಶೀಲಿಸಿದ್ದಾರೆ. ಆರೋಪಿಯ ಗುರುತು ಪತ್ತೆಗಾಗಿ ದೃಶ್ಯಾವಳಿಯನ್ನು ದೇವಪ್ಪಜ್ಜ ಅವರ ಪತ್ನಿ ಡಾ. ವಿದ್ಯಾ ಅವರಿಗೆ ತೋರಿಸಲಾಗಿದ್ದು, ಕುಟುಂಬ ಸದಸ್ಯರ ಹೇಳಿಕೆ ಪಡೆಯಲಾಗಿದೆ.
ಆರೋಪಿಯ ಭಾವಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿರುವ ಪೊಲೀಸರು, ಆತನ ಪತ್ತೆಗೆ ಸಾರ್ವಜನಿಕರನ್ನು ವಿನಂತಿಸಿದ್ದಾರೆ. ಮರು ತನಿಖೆಗೆ ನಿರ್ಧಾರೆ?ಎರಡು ವರ್ಷದ ಹಿಂದೆ ದೇವಪ್ಪಜ್ಜ ಅವರ ಮೇಲೆ ವ್ಯಕ್ತಿಯೊಬ್ಬ ಹಲ್ಲೆಗೆ ಮುಂದಾಗಿದ್ದ. ಆ ಕುರಿತು ದೇವಪ್ಪಜ್ಜ ಅವರು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಸಿ.ಸಿ ಟಿ.ವಿ ಕ್ಯಾಮೆರಾ ದೃಶ್ಯಾವಳಿ ಸಹ ಲಭ್ಯವಾಗಿತ್ತು. ಆರೋಪಿ ಗುರುತು ಸರಿಯಾಗಿ ಪತ್ತೆಯಾಗದ ಕಾರಣ, ಬಿ ರಿಪೋರ್ಟ್ ಹಾಕಿ ಪ್ರಕರಣ ಮುಕ್ತಾಯಗೊಳಿಸಲಾಗಿತ್ತು. ಅಂದು ಹಲ್ಲೆ ನಡೆಸಿದ ವ್ಯಕ್ತಿಯ ಗುರುತು ಹಾಗೂ ಈಗ ಕೊಲೆ ಮಾಡಿದ ವ್ಯಕ್ತಿಯ ಗುರುತು ಹೋಲಿಕೆಯಾಗುತ್ತಿರುವ ಬಗ್ಗೆ ಕುಟುಂಬ ಸದಸ್ಯರು ಸಂಶಯ ವ್ಯಕ್ತಪಡಿಸಿದ್ದಾರೆ. ಮುಕ್ತಾಯಗೊಳಿಸಿದ್ದ ಪ್ರಕರಣವನ್ನು ಮರು ತನಿಖೆ ನಡೆಸಲು ಪೊಲೀಸರು ಚಿಂತನೆ ನಡೆಸಿದ್ದಾರೆ.
ಇಂದು ಸಂಜೆ ಅಂತ್ಯಕ್ರಿಯೆ: ವೈಷ್ಣೋದೇವಿ ಮಂದಿರದಲ್ಲಿಯೇ ದೇವಪ್ಪಜ್ಜ ಅವರ ಅಂತ್ಯಕ್ರಿಯೆ ನಡೆಸಬೇಕೆಂದು ಕುಟುಂಬ ಸದಸ್ಯರು ಹಾಗೂ ಕೆಲವು ಭಕ್ತರು ನಿರ್ಧರಿಸಿದ್ದರು. ಜನವಸತಿ ಪ್ರದೇಶದಲ್ಲಿ ಅವಕಾಶವಿಲ್ಲದ ಕಾರಣ, ಅವರ ಮೂಲವಾದ ತಾಲ್ಲೂಕಿನ ಕುಸುಗಲ್ ಗ್ರಾಮದ ಸ್ಮಶಾನದಲ್ಲಿ ಮಂಗಳವಾರ ಮಧ್ಯಾಹ್ನ ಅಥವಾ ಸಂಜೆ ನಡೆಸಲು ನಿರ್ಧರಿಸಲಾಗಿದೆ. ಬೆಳಿಗ್ಗೆ ಕಿಮ್ಸ್ ಶವಾಗಾರದಿಂದ ನಗರದ ಲೋಕಪ್ಪನಹಕ್ಕಲದ ಅವರ ನಿವಾಸಕ್ಕೆ ಪ್ರಾರ್ಥಿವ ಶರೀರ ಕೊಂಡೊಯ್ದು, ನಂತರ ಕುಸುಗಲ್ ಗ್ರಾಮಕ್ಕೆ ಒಯ್ಯುವ ನಿರ್ಧಾರ ಕುಟುಂಬದವರು ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ದೇವಪ್ಪಜ್ಜ ಜ್ಯೋತಿಷ ಹೇಳುತ್ತಿದ್ದರು. ಹಿಂದೆ ಜಮೀನು ವಿವಾದ ಇತ್ತು. ಅದು ಇತ್ಯರ್ಥಗೊಂಡಿದೆ. ಜಮೀನು ವಿವಾದಕ್ಕೂ ಕೊಲೆಗೂ ಸಂಬಂಧವಿಲ್ಲ. ಮಾಟ ಮಂತ್ರ ಮಾಡುತ್ತಿದ್ದ ಬಗ್ಗೆ ಮಾಹಿತಿಯಿಲ್ಲ