ಭಾರತೀಯ ನೌಕಾಪಡೆಯ ಯುದ್ಧ ನೌಕೆ ಐಎನ್ಎಸ್ ಬ್ರಹ್ಮಪುತ್ರದಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ನೌಕೆಯ ಕಿರಿಯ ನಾವಿಕ ನಾಪತ್ತೆಯಾಗಿದ್ದು, ಶೋಧ ಕಾರ್ಯ ನಡೆಸಲಾಗಿದೆ. ಮುಂಬೈನ ನೌಕಾಪಡೆಯ ಡಾಕ್ಯಾರ್ಡ್ನಲ್ಲಿ ಬೆಂಕಿ ದುರಂತ ಸಂಭವಿಸಿದೆ. ಹಡಗು ಒಂದು ಕಡೆ ವಾಲಿದ್ದು, ಸಾಕಷ್ಟು ಹಾನಿಯುಂಟಾಗಿದೆ.
ಹಡಗನ್ನು ಸರಿಪಡಿಸುವ ಕಾರ್ಯಾಚರಣೆ ನಡೆಯುತ್ತಿದೆ.
ಜುಲೈ 21 ರ ಸಂಜೆ ಐಎನ್ಎಸ್ ಬ್ರಹ್ಮಪುತ್ರ ಯುದ್ಧನೌಕೆಯ ದುರಸ್ತಿ ಕಾರ್ಯ ನಡೆಸಲಾಗುತ್ತಿತ್ತು. ಈ ವೇಳೆ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಇತರ ಹಡಗುಗಳ ಸಿಬ್ಬಂದಿ ನೆರವಿನಿಂದ ಸೋಮವಾರ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು. ದುರಂತದಿಂದ ನೌಕೆ ಒಂದು ಕಡೆ ವಾಲಿದೆ. ಹಡಗನ್ನು ನೇರವಾಗಿಸಲು ಇನ್ನೂ ಸಾಧ್ಯವಾಗಿಲ್ಲ ಎಂದು ನೌಕಾಪಡೆ ಪ್ರಕಟಣೆಯಲ್ಲಿ ತಿಳಿಸಿದೆ.