ಬೆಂಗಳೂರು: ದೂರು ಕೊಟ್ಟ ಮಹಿಳೆಗೆ ನ್ಯಾಯಾಲಯದ ಆವರಣದಲ್ಲೇ ಚಾಕು ಇರಿದಿರುವುದು ನಗರದ ಮ್ಯಾಜಿಸ್ಟ್ರೇಟ್ ಕೋರ್ಟ್ನಲ್ಲಿ ನಡೆದಿದೆ.
ಚಾಕು ಇರಿತಕ್ಕೊಳಗಾದ ಮಹಿಳೆಯನ್ನು ವಿಮಲಾ ಎಂದು ಗುರುತಿಸಲಾಗಿದೆ. ಚಾಕು ಇರಿದ ಆರೋಪಿಯನ್ನು ಜಯರಾಮ್ ರೆಡ್ಡಿ ಎಂದು ಗುರುತಿಸಲಾಗಿದೆ.
ಆರೋಪಿ ವಿರುದ್ಧ ಮಹಿಳೆ ಶೇಷಾದ್ರಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇಂದು ವಿಚಾರಣೆಗೆ ನ್ಯಾಯಾಲಯಕ್ಕೆ ಬಂದಿದ್ದ ವೇಳೆ ಮಹಿಳೆಗೆ ಆರೋಪಿ ಕೋರ್ಟ್ ಹಾಲ್ 1 ರಲ್ಲಿ ಚಾಕು ಇರಿದಿದ್ದಾನೆ.
ವಕೀಲೆ ವಿಮಲಾ ಮತ್ತು ಆರೋಪಿ ಜಯರಾಮ ಸ್ನೇಹಿತರು. ವಕೀಲೆ ವಿಮಲಾ ಜೊತೆ ಕಳೆದ ಖಾಸಗಿ ಕ್ಷಣಗಳನ್ನು ಜಯರಾಮ ವಿಡಿಯೋ ಮಾಡಿಕೊಂಡಿದ್ದಾನೆ. ಅಲ್ಲದೆ ಜಯರಾಮ ಸ್ನೇಹಿತೆ ವಿಮಲಾ ಬಳಿಯಿಂದ ಹಂತಹಂತವಾಗಿ ಒಂದೂವರೆ ಕೋಟಿಗಿಂತಲೂ ಹೆಚ್ಚು ಹಣ ಪಡೆದಿದ್ದಾನೆ. ನಂತರ ಹೆಜ್ಜಾಲ ಬಳಿ ಇರುವ ಜಾಗದ ವಿಚಾರವಾಗಿ ಇಬ್ಬರಲ್ಲಿ ಕಿರಿಕ್ ಆಗಿತ್ತು.
ಬಳಿಕ ವಕೀಲೆ ವಿಮಲಾ ಶೇಷಾದ್ರಿಪುರಂ ಠಾಣೆಯಲ್ಲಿ ಜಯರಾಮ ವಿರುದ್ಧ ದೌರ್ಜನ್ಯ ಮತ್ತು ಜಾಗದ ವಿಚಾರವಾಗಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣ ಸಂಬಂಧ ಮಂಗಳವಾರ ಇಬ್ಬರೂ ವಿಚಾರಣೆಗೆ ನ್ಯಾಯಾಲಯದ ವಿಚಾರಣೆಗೆ ಹಾಜರಾಗಿದ್ದರು. ಈ ವೇಳೆ ಆರೋಪಿ ಜಯರಾಮ ಸ್ನೇಹಿತೆ, ವಕೀಲೆ ವಿಮಲಾಗೆ ಕೋರ್ಟ್ ಹಾಲ್ 1ರಲ್ಲಿ ಚಾಕು ಇರಿದಿದ್ದಾನೆ.
ಚಾಕು ಇರಿತಕ್ಕೊಳಗಾದ ಮಹಿಳೆಯ ಸ್ಥಿತಿ ಗಂಭೀರವಾಗಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.