ಬೆಂಗಳೂರು: ಎಸ್ವೈಎಸ್ವೈ ಯೋಜನೆಯನ್ನು ಸದುಪಯೋಗ ಪಡೆಯಿರಿ ಎಂದು ಕ್ರೀಡಾ ಸಚಿವ ನಾರಾಯಣಗೌಡ ಹೇಳಿದ್ದಾರೆ. ಈ ಸಂಬಂಧ ವಿಧಾನಸೌಧದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಜೆಟ್ ನಲ್ಲಿ ಘೋಷಿಸಿದ್ದಂತೆ ಸ್ವಾಮಿವಿವೇಕಾನಂದ ಯುವ ಸ್ವಸಹಾಯ ಗುಂಪುಗಳನ್ನು ರಚಿಸಲಾಗುತಿದ್ದು, ಈಗಾಗಲೇ ಮೊದಲ ಹಂತದಲ್ಲಿ 5956 ಗ್ರಾಮ ಪಂಚಾಯತ್ನಲ್ಲಿ ಒಂದೊಂದು ಆದ್ಯತಾ ಗುಂಪುಗಳನ್ನು ರಚಿಸಲಾಗಿದೆ. ಮೊದಲ ಹಂತದಲ್ಲಿ 1754 ಗುಂಪುಗಳಿಗೆ ತಲಾ 10 ಸಾವಿರ ಸುತ್ತುನಿಧಿ ಬಿಡುಗಡೆ ಮಾಡಲಾಗಿದ್ದು,
ಇನ್ನೊಂದು ವಾರದಲ್ಲಿ ನೋಂದಣಿಯಾಗಿರುವ ಎಲ್ಲಾ ಗುಂಪುಗಳಿಗೆ ಸುತ್ತುನಿಧಿ ಬಿಡುಗಡೆ ಮಾಡಲಾಗುವುದು. ಇದರ ಜೊತೆಗೆ ಒಂದು ವಾರದೊಳಗೆ ಎರಡನೇ ಹಂತದಲ್ಲಿ ಪ್ರತಿ ಪಂಚಾಯತ್ ಗೆ ಎರಡರಂತೆ 12 ಸಾವಿರ ಸ್ವಾಮಿ ವಿವೇಕಾನಂದ ಯುವಕರ ಜಂಟಿ ಹಕ್ಕು ಬಾಧ್ಯತಾ ಗುಂಪುಗಳ ರಚನಾ ಕಾರ್ಯ ಪೂರ್ಣಗೊಳಿಸಲಾಗುವುದು ಎಂದು ಸಚಿವ ಡಾ.ನಾರಾಯಣಗೌಡ ಅವರು ತಿಳಿಸಿದ್ದಾರೆ. SYSY ಯೋಜನೆಯನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಲು ವಿಷನ್ ಕರ್ನಾಟಕ ಫೌಂಡೇಷನ್, ಬೆಂಗಳೂರು ಎಂಬ ಸಂಸ್ಥೆಯ ಮೂಲಕ ಈಗಾಗಲೇ 85 ಯೋಜನಾ ವರದಿಗಳನ್ನು ತಯಾರಿಸಿ ಪೋರ್ಟಲ್ ನಲ್ಲಿ ಅಳವಡಿಸಲಾಗಿದ್ದು, ರಚನೆಗೊಂಡಂತಹ ಗುಂಪುಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಚಿವ ಡಾ.ನಾರಾಯಣಗೌಡ ಅವರು ಹೇಳಿದ್ದಾರೆ.