ಬೆಂಗಳೂರು: ಬೆಳಗಾವಿಗೆ ವಂದೇ ಭಾರತ್ ರೈಲು ವಿಸ್ತರಣೆ ಮಾಡಲು ಮೂಲಭೂತ ಸೌಕರ್ಯಗಳ ಕೊರತೆ ಸರಿಯಿಲ್ಲ ಎಂದು ರೈಲ್ವೆ ಇಲಾಖೆ ಪ್ರಸ್ತಾವನೆ ತಿರಸ್ಕಾರ ಮಾಡಿದೆ ಎಂದು ಮೂಲಭೂತ ಸೌಕರ್ಯಗಳ ಸಚಿವ ಎಂಬಿ ಪಾಟೀಲ್ ತಿಳಿಸಿದ್ದಾರೆ
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಪ್ರಕಾಶ್ ಹುಕ್ಕೇರಿ ಪ್ರಶ್ನೆಗೆ ಎಂಬಿ ಪಾಟೀಲ್ ಉತ್ತರಿಸಿದರು. ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಯೋಜನೆಯನ್ನು ಬೆಳಗಾವಿಗೆ ವಿಸ್ತರಣೆ ಮಾಡಬೇಕು. ಈಗಾಗಲೇ ರೈಲ್ವೆ ಇಲಾಖೆ ಟ್ರಯಲ್ ರನ್ ಮಾಡಿದೆ. ಆದರೆ ಈಗ ಮೂಲಭೂತ ಸೌಕರ್ಯಗಳ ಕೊರತೆ ಇದೆ ಎಂದು ಹೇಳಿ ಯೋಜನೆ ವಿಸ್ತರಣೆ ಮಾಡುವುದಿಲ್ಲ ಎಂದು ಹೇಳಿದೆ. ಇದಕ್ಕೆ ನಾವು ಒಪ್ಪುವುದಿಲ್ಲ. ಕೂಡಲೇ ಬೆಳಗಾವಿಗೆ ವಂದೇ ಭಾರತ್ ವಿಸ್ತರಣೆ ಮಾಡಲು ಕ್ರಮವಹಿಸಿ. ವಂದೇ ಭಾರತ್ ವಿಸ್ತರಣೆ ಮಾಡದೇ ಹೋದರೆ ರಾಜ್ಯ ಸರ್ಕಾರ ರೈಲ್ವೆ ಯೋಜನೆಗೆ ಬಿಡುಗಡೆ ಮಾಡುವ ಹಣ ತಡೆಹಿಡಿಯಿರಿ ಎಂದು ಒತ್ತಾಯಿಸಿದರು
ಇದಕ್ಕೆ ಸಚಿವ ಎಂಬಿ ಪಾಟೀಲ್ ಉತ್ತರ ನೀಡಿ, ರೈಲ್ವೆ ಇಲಾಖೆಯಿಂದ ಮಾಹಿತಿ ಪಡೆದು ಉತ್ತರ ನೀಡಲಾಗಿದೆ. ಈಗಾಗಲೇ ರೈಲ್ವೆ ಇಲಾಖೆ ಟ್ರಯಲ್ ರನ್ ಮಾಡಿದೆ. ಟ್ರಯಲ್ ಮಾಡಿ ಮೂಲಭೂತ ಸೌಕರ್ಯಗಳು ಇಲ್ಲ ಎಂದು ವಿಸ್ತರಣೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರಕ್ಕೆ ನಾವು ಮತ್ತೆ ಮನವಿ ಮಾಡುತ್ತೇವೆ. ರೈಲ್ವೆ ಸಚಿವರು ನಮ್ಮ ರಾಜ್ಯದವರೇ ಆಗಿದ್ದಾರೆ. ಹೀಗಾಗಿ ಮತ್ತೊಮ್ಮೆ ಬೆಳಗಾವಿಗೆ ವಂದೇ ಭಾರತ್ ರೈಲು ವಿಸ್ತರಣೆ ಮಾಡುವ ಬಗ್ಗೆ ಮನವಿ ಮಾಡುತ್ತೇವೆ ಎಂದರು.